ಗದಗ: ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮರಳು ಸಾಗಾಟ ನಡೆಯುತ್ತಿದ್ದರೂ, ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಈ ಮೇಲಿನ ಇಲಾಖೆಯ ಅಧಿಕಾರಿಗಳ ಮೌನ ಕಂಡಾಗ ಪರೋಕ್ಷವಾಗಿ ಇವರು ಅಕ್ರಮ ಮುರಳುಗಾರಿಕೆಯನ್ನು ಬೆಂಬಲಿಸುವಂತೆ ಕಾಣುತ್ತಿದೆ. ಆದ್ದರಿಂದ ಮರಳು ಮಾಫಿಯಾದವರು ನೀಡುವ ‘ಮಾಮೂಲಿ’ ಇವರನ್ನೆಲ್ಲ ಮೌನವಾಗಿರುವಂತೆ ಮಾಡುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಶಿರಹಟ್ಟಿ- ಲಕ್ಷ್ಮೇಶ್ವರ ತಾಲೂಕಿನ ಹೊಳೆ ಇಟಗಿ ತೊಳಲಿ,ನಾಗರಮಡುವು, ಅಂಕಲಿ, ಹುಲ್ಲೂರು, ಪುಟಗಾಂವ್ ಬಡ್ನಿ, ನೆಲೋಗಲ್, ಆದ್ರಳ್ಳಿ, ಚನ್ನಪಟ್ಟಣ ಸೇರಿದಂತೆ ಅನೇಕ ಗ್ರಾಮದಲ್ಲಿ ಕಾರ್ಮಿಕರನ್ನು ಬಳಸಿಕೊಂಡು ಮರಳು ಲೂಟಿ ಮಾಡಲಾಗುತ್ತಿದೆ. ಇಲ್ಲಿ ಹಗಲು ಮತ್ತು ರಾತ್ರಿ ಅಕ್ರಮವಾಗಿ ಹಳ್ಳ-ಕೊಳ್ಳ ಹಾಗೂ ಹೊಲಗಳ ಗರ್ಭ ಸೀಳಿ ಅವೈಜ್ಞಾನಿಕವಾಗಿ ಮರಳನ್ನು ತೆಗೆಯಲಾಗುತ್ತಿದೆ. ಈ ಮರಳಿಗೆ ಉತ್ತಮ ಬೆಲೆ ಇದ್ದು ದಿನನಿತ್ಯ 25 ರಿಂದ 30 ಲಾರಿ ಮರಳನ್ನು ತಾಲೂಕು ಮತ್ತು ಪಕ್ಕದ ಬೇರೆ ಜಿಲ್ಲೆಗಳಿಗೂ ಸಾಗಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮರಳು ಮಾಫಿಯಾಕ್ಕೆ ಮೌನವಾದರಾ?
ಕಳೆದ 2024ರ ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಪರವಾನಿಗೆಯನ್ನು ಪಡೆದು ನಡೆಸುತ್ತಿದ್ದ ಮರಳುಗಾರಿಕೆ ಬಂದಾಗಿದೆ. ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದ ಮರಳು ಮಾಫಿಯಾ ಕಳ್ಳರು ಪ್ರಾಕೃತಿಕ ಸಂಪತ್ತನ್ನು ಅಪೋಶನ್ ತೆಗೆದುಕೊಳ್ಳುವಂತೆ ಲೂಟಿ ಮುಂದುವರಿಸಿದ್ದಾರೆ. ದಿನನಿತ್ಯ ರಾತ್ರಿ ಹಗಲೆನ್ನದೆ ಲಾರಿಗಳಲ್ಲಿ ಅಧಿಕ ಭಾರದಲ್ಲಿ ಮರಳು ತುಂಬಿದ ಲಾರಿಗಳು ಓಡಾಡುತ್ತಿದ್ದು, ಲಕ್ಷ್ಮೇಶ್ವರ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಕಟ್ಟಡ ಕಟ್ಟಲು ದಾಸ್ತಾನು ಮಾಡಿರುವ ಲೋಡ್ ಗಟ್ಟಲೆ ಮರಳು ಸಂಗ್ರಹ ಮಾಡಿರುವದೇ ಇದಕ್ಕೆ ಸಾಕ್ಷಿಯಾಗಿದೆ, ನದಿ ತೀರದಲ್ಲಿ ಮರಳುಗಾರಿಕೆಯಿಂದ ನೈಸರ್ಗಿಕ ಸಂಪತ್ತು ನಾಶವಾಗುವುದಲ್ಲದೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ರಸ್ತೆಗಳೂ ಕೂಡ ಹಾನಿಗಿಡಾಗುತ್ತಿದೆ.

ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕಿ.!
ಅವಳಿ ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಈ ಲಾರಿಗಳು ಅಧಿಕ ಭಾರ ಮರಳು ಹಾಕಿಕೊಂಡು ಬರುತ್ತವೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿ ಹೋಗಿವೆ. ರಾತ್ರಿ ಹೊತ್ತಲ್ಲಿ ಹಲವಾರು ಲಾರಿಗಳು ಹಳ್ಳಿ ಹಳ್ಳಿಗಳ ಮಾರ್ಗದ ಮೂಲಕ ಹೋಗುತ್ತವೆ. ಇದರಿಂದ ಗ್ರಾಮಸ್ಥರು ನೆಮ್ಮದಿಯಾಗಿ ನಿದ್ರೆ ಮಾಡದ ಪರಿಸ್ಥಿತಿ ಎದುರಾಗಿದೆ.
ಆದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅದರಿಂದ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಕೋಟ್:
“ಮಾರ್ಚ ತಿಂಗಳಲ್ಲಿ ಅಕ್ರಮ ಮರಳು ತುಂಬಿರುವ ಲಾರಿಗಳನ್ನು ಸೀಜ್ ಮಾಡಿದ್ದೆವೆ. ಅದೇರೀತಿ ಟ್ರ್ಯಾಕ್ಟರ್ ಗಳನ್ನು ಸೀಜ್, ಮಾಡಿದ್ದು ಅಕ್ರಮ ಮರಳು ದಂಧೆಕೊರರ ವಿರುದ್ಧ ಕ್ರಮ ಕೈಗೊಳ್ಳುತ್ತೆವೆ.”
ಉಮೇಶ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಶಿರಹಟ್ಟಿ.
ಕೋಟ್:
“ನಮ್ಮ ಊರಿನ ರಸ್ತೆಗಳು ಹಾಳಾಗುತ್ತಿವೆ. ಅಧಿಕ ಭಾರ ಹೊತ್ತ ಮರಳು ಲಾರಿಗಳು ಹಗಲು ರಾತ್ರಿ ಎನ್ನದೇ ಓಡಾಡುತ್ತಿವೆ.ರಾತ್ರಿ ನೆಮ್ಮದಿಯಿಂದ ಇಲ್ಲಿನ ಜನತು ನಿದ್ರಿಸಲು ಅಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು.
ಜೀವಪ್ಪ ಡಾವ ಮತ್ತು ಪಾರಪ್ಪ ಲಮಾಣಿ. ಹರದಗಟ್ಟಿ ಗ್ರಾಮಸ್ಥರು.