ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಿಲಿನ ತಾಪದ ಜೊತೆಗೆ ಧಗೆಯಿಂದ ಪಾರಾಗಲು ಜನರು ಪರದಾಡುವಂತಾಗಿದೆ.
ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ತಾಪ 40 ಡಿಗ್ರಿ ಆಸುಪಾಸಿನಲ್ಲಿದೆ. ಇದರಿಂದ ಬಿಸಿಲಿನ ಏರಿಕೆಯ ಜೊತೆಗೆ ಗಾಳಿ ಬೀಸುವುದು ಕಡಿಮೆಯಾಗಿದೆ. ಬಿಸಿಲಿನ ಝಳದಿಂದ ಜನರು ಹೈರಾಣಾಗಿದ್ದಾರೆ.
ತಂಪ ಪಾನೀಯಗಳತ್ತ ಚಿತ್ತ
ಬಿಸಿಲಿನಿಂದ ದೇಹ ಬಳಲುವುದಲ್ಲದೇ ಬಾಯಾರಿಕೆ ನೀಗಿಸಿಕೊಳ್ಳಲು ಜನರು ತಂಪು ಪಾನೀಯ, ಕಲ್ಲಂಗಡಿ, ಶರಬತ್, ಎಳೆನೀರು ಸೇರಿದಂತೆ ಇನ್ನಿತರೆ ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದರೊಂದಿಗೆ ಮೊಸರು, ಲಸ್ಸಿ, ಮಜ್ಜಿಗೆ ಮಾರಾಟವು ಜೋರಾಗಿದೆ. ಬಿಸಲಿನಿಂದಾಗಿ ಮಧ್ಯಾಹ್ನದ ಸಮಯದಲ್ಲಿ ಜನರ ಮತ್ತು ವಾಹನಗಳ ಓಡಾಟವು ಕಡಿಮೆಯಾಗಿದೆ.
ಜಾನುವಾರುಗಳಿಗೆ ಸಂಕಷ್ಟ:
ಬಿಸಿಲಿನ ಬೆಗೆಯಿಂದ ನಿತ್ಯ ಹೊಲ ಮತ್ತು ಇನ್ನೀತರ ಪ್ರದೇಶಗಳಿಗೆ ಮೇಯಲು ಹೋಗುವ ಜಾನುವಾರುಗಳು ಅತಿಯಾದ ಬಿಸಿಲಿನಿಂದ ಬಸವಳಿದು ನೆರಳಿಗಾಗಿ ಮರಗಳನ್ನು ಆಶ್ರಯಿಸುವಂತಾಗಿದೆ.

ವಿದ್ಯುತ್ ಕಣ್ಮುಚ್ಚಾಲೆ:
ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಮುಚ್ಚಾಲೆ ಆಡುವುದರಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹಗಲಿನಲ್ಲಿ ಬಿಸಿಲಿನ ತಾಪದಿಂದ ಜನರು ಪರಿತಪಿಸುತ್ತಿದ್ದರೆ ರಾತ್ರಿ ವೇಳೆ ಕುದಿಯಿಂದ ಸಂಕಷ್ಟ ಹೇಳತೀರದಾಗಿದೆ. ಗ್ರಾಮೀಣ ಪ್ರದೇಶ ಬಹುತೇಕ ಮಣ್ಣಿನ ಮನೆಗಳ ಜೊತೆಗೆ ಆರ್.ಸಿ.ಸಿ ಮನೆಗಳಿದ್ದರೂ ತಾರಸಿಯಲ್ಲಿ ಮಲಗುವುದರಿಂದ ಸೊಳ್ಳೆಯ ಕಾಟಕ್ಕೆ ನಿದ್ದೆ ಬಾರದಾಗಿದೆ. ಇದರಿಂದ ನಿತ್ಯ ಜಾಗರಣೆ ಮಾಡುವಂತಾಗಿದೆ.
‘ಈ ಬಾರಿ ಮಾರ್ಚ ತಿಂಗಳಲ್ಲೆ ಬೇಸಿಗೆ ಪ್ರಾರಂಭದಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಬೇಸಿಗೆ ಸಮಯದಲ್ಲಿ ಬಿಸಿಲಿನ ತಾಪ ಮತ್ತು ಕುದಿಯಿಂದ ವಯೋವೃದ್ಧರು ಮತ್ತು ಚಿಕ್ಕಮಕ್ಕಳು ಸಂಕಟ ಅನುಭವಿಸುವಂತಾಗಿದೆ’ಎಂದು ಕುಂದ್ರಳ್ಳಿ ಗ್ರಾಮದ ಸಂತೋಷ ರಾಠೋಡ ಬೇಸರ ವ್ಯಕ್ತಪಡಿಸುತ್ತಾರೆ.
ನೀರಿಗಾಗಿ ಪರದಾಟ:
ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಬಹುತೇಕ ಕೆರೆ, ಹಳ್ಳ, ಕೊಳ್ಳ, ನದಿ ತೀರದ ಪ್ರದೇಶಗಳಲ್ಲಿ ನೀರು ಕಡಿಮೆಯಾಗಿದೆ, ಜಮೀನುಗಳಲ್ಲಿನ ಕೃಷಿ ಹೊಂಡ, ತಗ್ಗು ಪ್ರದೇಶಗಳಲ್ಲಿನ ನೀರು ಸಹ ಬತ್ತಿ ಹೋಗಿದೆ. ಇದರಿಂದ ನಾಯಿ, ಬಿಡಾಡಿ ದನಗಳು ಸೇರಿದಂತೆ ಕಾಡು ಪ್ರಾಣಿಗಳೂ ನೀರಿಗಾಗಿ ಪರದಾಡುವಂತಾಗಿದೆ.
ಹೆಚ್ಚಿನ ಪ್ರಮಾಣದ ನೀರು ಸೇವಿಸಿ
ಬಿಸಲಿನ ತಾಪದಿಂದ ಪಾರಾಗಲು ಹೆಚ್ಚಿನ ಪ್ರಮಾಣದ ನೀರು ತಂಪಾದ ಪಾನೀಯಗಳು ಹಣ್ಣು ತರಕಾರಿ ಸೇವಿಸಬೇಕು. ಜೊತಗೆ ದೇಹಕ್ಕೆ ಹಗುರುವಾದ ಕಾಟನ್ ಬಟ್ಟೆ ಧರಿಸಬೇಕು. ಮಧ್ಯಾಹ್ನದ ವೇಳೆ ಸಾಧ್ಯವಾದಷ್ಟು ಮಟ್ಟಿಗೆ ನೆರಳಿನಲ್ಲಿ ಇರುವುದು ಒಳ್ಳೆಯದು. ಜಂಕ್ ಪುಡ್ ನಿಂದ ದೂರವಿರಬೇಕು ಎಂದು ತಾಲ್ಲೂಕು ಆರೋಗ್ಯ ಕೇಂದ್ರದ ವೈದ್ಯರಾದ ಶ್ರೀಕಾಂತ ಕಾಟೇವಾಲ್ ಸಲಹೆ ನೀಡಿದ್ದಾರೆ.