ಗದಗ: ದ್ವಿದರ್ಜೆ ನೌಕರರೊಬ್ಬರು ಸರ್ಕಾರಕ್ಕೆ ಸಲ್ಲಿಸಬೇಕಾದ ಲಕ್ಷಾಂತರ ರೂ.ಹಣವನ್ನ ದುರುಪಯೋಗ ಪಡಿಸಿಕೊಂಡಿರುವ ಘಟನೆ ಗದಗ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
ಮಹಲಿಂಗೇಶ್ ಹಿರೇಮಠ.
ದ್ವಿತಿಯ ದರ್ಜೆ ಸಹಾಯಕರಾದ (SDA) ರೂಪಾ ದಲಬಂಜನ ಅನ್ನೋರೆ, ಸರ್ಕಾರದ ದುಡ್ಡನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಸದ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅವರನ್ನ ಅಮಾನತ್ತು ಕೂಡ ಮಾಡಲಾಗಿದೆ. ಅಲ್ಲದೇ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.
ರೂಪಾ ದಲಬಂಜನ, 2023 ರ ಅಕ್ಟೋಬರ್ 9 ರಂದೇ ತಹಶೀಲ್ದಾರ ಕಚೇರಿಯಲ್ಲಿ ಪಹಣಿ ವಿತರಣೆ ನಿರ್ವಾಹಕ ಕೆಲಸ ವಹಿಸಿಕೊಂಡಿದ್ದಾರೆ. ಹೀಗೆ ಪಹಣಿ ವಿತರಣೆ ಮಾಡಿ ಸಾರ್ವಜನಿಕರಿಂದ ಬಂದ ಹಣವನ್ನ ಮರುದಿನವೇ K2 ಚಲನ್ ಮೂಲಕ ಸರ್ಕಾರಕ್ಕೆ ಪಾವತಿಸಬೇಕು. ನಂತರ ಕ್ಯಾಶ್ ಬುಕ್ ಬರೆದು ಮೇಲಾಧಿಕಾರಿಗಳ ಅನುಮೋದನೆಗೆ ಹಾಜರುಪಡಿಸಬೇಕಾಗಿತ್ತು. ಆದರೆ ಇದಾವದನ್ನೂ ಮಾಡದ ರೂಪಾ ದಲಬಂಜನ, ಸರ್ಕಾರಕ್ಕೆ ಕಟ್ಟಬೇಕಾಗಿದ್ದ ಬರೊಬ್ಬರಿ 16,33,110/- ರೂ.ಗಳನ್ನ ವರ್ಷದುದ್ದಕ್ಕೂ ಹಂತ ಹಂತವಾಗಿ ನುಂಗಿ ನೀರು ಕುಡಿದಿದ್ದಾರೆ ಅಂತಾ ಸ್ವತಃ ತಹಶೀಲ್ದಾರ ಕಚೇರಿಯ ಶಿರಸ್ತೆದಾರರು ತಮ್ಮ ವರದಿ ನೀಡಿದ್ದಾರೆ.

ಇನ್ನು ಇಷ್ಟೊಂದು ದುಡ್ಡು ಒಂದೇ ದಿನದಲ್ಲಿ ಮಾಯವಾದುದ್ದಲ್ಲ. ಪ್ರತಿದಿನ ಸಾರ್ವಜನಿಕರು ಭೂಮಿಕೇಂದ್ರದಲ್ಲಿ ತಮ್ಮ ಜಮೀನುಗಳ ಪಹಣಿ ಪಡೆದು, ಇಂತಿಷ್ಟು ಅಂತ ಸರ್ಕಾರದ ದರ ಪಾವತಿಸಿರುತ್ತಾರೆ.ಹೀಗೆ ವರ್ಷಾನುಗಟ್ಟಲೇ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನೇ ಗುಳುಂ ಮಾಡಲಾಗಿದೆ. ಅಂದರೆ, 2023 ರ ಡಿಸೆಂಬರ್ 06 ರಿಂದ 2025 ರ ಜನೇವರಿ 17 ನೇ ತಾರೀಖವರೆಗೂ ಪಹಣಿ ಮುಟೇಶನ್ ವಿತರಿಸಿದ ಹಣವನ್ನ ಸರ್ಕಾರಕ್ಕೆ ತುಂಬಿಯೇ ಇಲ್ಲ. ಸರಿಸುಮಾರು ಒಂದು ವರ್ಷದಷ್ಟು ಪಹಣಿ ವಿತರಿಸಿದ ಹಣವನ್ನ ನುಂಗಿ ನೀರು ಕುಡಿದಿದ್ದಾರೆ.
ಇನ್ನು ಇಲ್ಲಿ ವಿಚಿತ್ರ ಎನ್ನಿಸುವದು, ವರ್ಷಾನುಗಟ್ಟಲೇ ಪಹಣಿ ದುಡ್ಡನ್ನ ಇರುವೆಯಂತೆ ನುಂಗುತ್ತಾ ಹೋದರೂ, ಕಿಂಚಿತ್ತಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ಬರದೇ ಹೋಯಿತಾ? ಅನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟು ಹಾಕಿದೆ. 2023 ರಿಂದಲೇ ಶುರುವಾದ ಈ ಬೇಲಿಯೇ ಎದ್ದು ಹೊಲ ಮೇಯ್ದಿರುವ ಘಟನೆ, 2025 ರಲ್ಲಾದರೂ ಮೇಲಾಧಿಕಾರಿಗಳ ಗಮನಕ್ಕೆ ಬಂದಿರುವದು ನಿಜಕ್ಕೂ ವಿಪರ್ಯಾಸ. ಪಹಣಿ ಮುಟೇಶನ್ ವಿತರಿಸಿದ ದಾಖಲಾತಿಗಳನ್ನ ಪರಿಶೀಲಿಸಿದ ಭೂಮಿ ಶಿರಸ್ತೆದಾರರು, 16 ಲಕ್ಷಕ್ಕೂ ಅಧಿಕ ಹಣ ಸರ್ಕಾರಕ್ಕೆ ಸಲ್ಲಿಕೆ ಆಗಿಯೇ ಇಲ್ಲಾ ಅಂತಾ, 27-01-2025 ರಂದು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ. ಆ ಮೂಲಕ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನೋ ರೀತಿ, ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲು ಶುರು ಮಾಡಿದ್ದಾರೆ.
ಪ್ರಕರಣದ ಕುರಿತು ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಎರೆಡೆರೆಡು ಬಾರಿ ನೋಟೀಸ್ ನೀಡಿದರೂ ರೂಪಾ ದಲಬಂಜನರಿಂದ ಯಾವುದೇ ಉತ್ತರ ಬಂದಿಲ್ಲ. ಮೇಲಾಗಿ ಫೆ.9 ರಿಂದ ಅವರು ಕಚೇರಿಗೆ ಬಂದೇ ಇಲ್ಲ ಎನ್ನಲಾಗಿದೆ. ಯಾವಾಗ ರೂಪಾ ದಲಬಂಜನ್ ಕಚೇರಿಗೆ ಚಕ್ಕರ್ ಹಾಕೋಕೆ ಶುರು ಮಾಡಿದ್ದಾರೋ, ಆವಾಗ ಕಚೇರಿಯ ಸಿಬ್ಬಂದಿ ತಡಕಾಯಿಸಿ ಪ್ರಕರಣದ ಬಗ್ಗೆ ಮತ್ತಷ್ಟು ಗಂಭೀರತೆ ತೆಗೆದುಕೊಂಡಿದ್ದಾರೆ.
ಕಚೇರಿಗೆ ಬಾರದ ರೂಪಾ ಅವರ ನಿವಾಸಕ್ಕೂ ಸಿಬ್ಬಂದಿಗಳು ತೆರಳಿ, ಈ ಬಗ್ಗೆ ವಿಚಾರಿಸಿದಾಗ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಯಾವುದೇ ದಾರಿ ಕಾಣದೇ, ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ, ರೂಪಾ ಅವರು ತೀವ್ರ ಕರ್ತವ್ಯ ಲೋಪವೆಸಗಿದ್ದು ಕಂಡು ಬಂದ ಹಿನ್ನೆಲೆ, ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957 ರ ನಿಯಮ 10(1)(ಡಿ) ರನ್ವಯ ವಿಚಾರಣೆ ಕಾಯ್ದಿರಿಸಿ 05-03-2025 ರಂದು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಹಾಗೂ ಈ ಅವಧಿಯಲ್ಲಿ ತಹಶೀಲ್ದಾರ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಮತ್ತು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ,ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರಿಗೆ ಆದೇಶಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ವರ್ಷದುದ್ದಕ್ಕೂ ನಡೆದ ಈ ಪ್ರಕರಣದ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ? ಹಾಗೂ ಸರ್ಕಾರಿ ದುಡ್ಡು ಹೋಗಿದ್ದಾದ್ರೂ ಎಲ್ಲಿ ಅನ್ನೋದನ್ನ ಪತ್ತೆ ಹಚ್ಚುತ್ತಿದ್ದಾರೆ.