ಗದಗ: ಸಾಕಷ್ಟು ರಾಜಕೀಯ ಹಾಗೂ ಕಾನೂನಾತ್ಮಕ ತಿರುವುಗಳನ್ನ ಪಡೆದುಕೊಂಡು ಗದಗ ಬೆಟಗೇರಿ ನಗರಸಭೆ ಮೇಲೆ ಕಾಂಗ್ರೆಸ್ ಬಾವುಟ ನೆಟ್ಟಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇದೀಗ ಮತ್ತೇ ಕಾನೂನು ಸಮರಕ್ಕೆ ನಾಂದಿಯಾಗಿದೆ. ಆ ಮೂಲಕ ಬಹುಮತದೊಂದಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಮುಂದಿನ ಅಧಿಕಾರಕ್ಕೆ ಗೃಹಣ ಹಿಡಿದಂತಾಗಿದ್ದು, ನ್ಯಾಯಾಲಯದ ಕದ ತಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.
ವರದಿ: ಮಹಲಿಂಗೇಶ್ ಹಿರೇಮಠ.
ಹೌದು, ಕಳೆದ ಎರೆಡು ದಿನಗಳ ಹಿಂದಷ್ಟೇ, (28-02-2025) ರಂದು ಭಾರೀ ಹೈಡ್ರಾಮಗಳ ನಡುವೆ ಗದಗ ಬೆಟಗೇರಿ ನಗರಸಭೆ 2 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ರಂಗೇರಿದ ಕಣವಾಗಿ ಪೂರ್ಣಗೊಂಡಿತ್ತು. ಮೊದಲನೇ ಅವಧಿಯಲ್ಲಿ ಬಿಜೆಪಿ ತನ್ನ ಸಂಖ್ಯಾಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದು ಆಡಳಿತ ನಡೆಸಿತ್ತು.ಆದರೆ ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷ ಹೇಗಾದರೂ ಆಡಳಿತ ಹಿಡಿಯಬೇಕೆಂಬ ಜಿದ್ದಿಗೆ ಬಿದ್ದಿತ್ತು.
ಇನ್ನು ಫೆ.28 ರಂದೇ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ, ಚುನಾವಣಾ ಪ್ರಕ್ರಿಯೆ ಮುಂದೂಡಿ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು.ಆದರೆ ಆದೇಶ ಪ್ರತಿ ಚುನಾವಣಾ ಅಧಿಕಾರಿ ಕೈ ಸೇರುವ ಮೊದಲೇ ಚುನಾವಣೆ ಪ್ರಕ್ರಿಯೆ ಮುಗಿದು ಹೋಗಿತ್ತು. ಹೀಗೆ ಕೋರ್ಟ್ ಆದೇಶದ ನಡುವೆಯೂ ಚುನಾವಣಾ ನಡೆಸಿದ್ದನ್ನ ಫೆ.28 ರ ಸಂಜೆಯೇ ಆಕ್ಷೆಪ ವ್ಯಕ್ತಪಡಿಸಿ, ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂದು, ಸರ್ಕಾರದ ಪರ ವಕೀಲ ಅಡ್ವಕೇಟ್ ಜನರಲ್ ಕೋರ್ಟ್ ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು.ಸದ್ಯ ಈ ವಿಚಾರಣೆ ಮಾ.5 ರಂದು ನಡೆಯಲಿದೆ.
ಹೀಗಾಗಿ ಚುನಾವಣೆ ಮುಂದೂಡಿದ ಕೋರ್ಟ್ ಆದೇಶವನ್ನ ಪರಿಗಣಿಸದೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಪಕ್ಷದ ಸದಸ್ಯರು ಆರೋಪಿಸಿದ್ದರು. ಇದರ ಬೆನ್ನಲ್ಲೇ, ಇದೀಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿ ಇನ್ನೇನು ಆಡಳಿತ ನಡೆಸಬೇಕು ಅನ್ನುವಷ್ಟರಲ್ಲಿ, ಚುನಾವಣೆ ನಡೆಸಿದ್ದ ಅಧಿಕಾರಿಗಳಿಂದಲೇ ಇದೀಗ, ಫೆ.28 ರಂದು ನಡೆದ ನಗರಸಭೆ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿದ್ದು ಹಾಗೂ ನೂತನ ಅಧ್ಯಕ್ಷ ಉಪಾಧ್ಯಕ್ಷರ ಮುಂದಿನ ಅಧಿಕಾರವಧಿಯನ್ನ (ಸ್ಥಗಿತಗೊಳಿಸಲಾಗಿದೆ) ತಡೆಹಿಡಿಯಲಾಗಿದೆ. ಹೀಗಾಗಿ ಗದಗ ಬೆಟಗೇರಿ ನಗರಸಭೆ ಮತ್ತೊಮ್ಮೆ ಕಾನೂನು ಸಮರಕ್ಕೆ ನಾಂದಿಯಾಗಿದೆ.
ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಇವರ ಡಬ್ಲ್ಯೂಪಿ ನಂ.100124/2025 ದಿನಾಂಕ 28.02.2025ರ ಆದೇಶದಂತೆ, ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಇವರ ಮುಂದಿನ ಆದೇಶದವರೆಗೆ ಸದರಿ ದಿನಾಂಕ 28.02.2025ರ ಚುನಾವಣೆ ನಡವಳಿಯಂತೆ ಘೋಷಿತ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು/ತಡೆಹಿಡಿಯಲಾಗಿದ್ದು, ಕಾರಣ ಘೋಷಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸದರ ನಗರಸಭೆಯ ಅಧಿಕಾರಭಾರ ಮತ್ತು ಯಾವುದೇ ಕಾರ್ಯ ಕಲಾಪಗಳನ್ನು ನಡೆಸದಂತೆ ಈ ಮೂಲಕ ಸೂಚಿಸಿದೆ ಎಂದು ಚುನಾವಣಾ ಅಧಿಕಾರಿ ಗಂಗಪ್ಪ ಎಂ. ಅವರು ನಗರಸಭೆ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಮತ್ತು ಸಂಬಂಧಿಸಿದ ತಿಳುವಳಿಕೆ ಪತ್ರ ರವಾನಿಸಿದ್ದಾರೆ.

ಇದರಿಂದ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತದ ಕನಸು ಕಂಡಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬ್ರೆಕ್ ಬಿದ್ದಂತಾಗಿದ್ದು, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ ಕ್ಷೇತ್ರದಲ್ಲಿ ನಗರಸಭೆ ಅಧಿಕಾರದ ಗುದ್ದಾಟ ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.
ಇನ್ನು 28-02-2025 ರಂದೇ (ಚುನಾವಣೆ ನಡೆದ ದಿನವೇ) ತಿಳುವಳಿಕೆ ಪತ್ರ ರವಾನೆ ಆಗಿದ್ದು, ಇಂದು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ಸದ್ಯಕ್ಕೆ ಮುಂದಿನ ವಿಚಾರಣೆ (5-3-2025) ವರೆಗೂ ನಗರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ, ಚುನಾವಣೆ ನಡುವಳಿ ಕುರಿತು ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಹಾಗೂ ಕರ್ನಾಟಕ ರಾಜ್ಯಪತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪ್ರಕಟಣೆ ಹೀಗೆ ಈ ಮೂರು ಪ್ರಕ್ರಿಯೆಗಳಿಗೆ ತಡೆ ಬಿದ್ದಂತಾಗಿದೆ. ಚುನಾವಣೆ ಮುಂದೂಡಿದ ಆದೇಶ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನಮ್ಮ ಕೈ ಸೇರಿದೆ.ಹೀಗಾಗಿ ನಂತರದ ಪ್ರಕ್ರಿಯೆಗಳನ್ನ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಕೋರ್ಟ್ ಆದೇಶ ನೋಡಿಕೊಂಡು, ಅಧಿಕಾರಿವಧಿಯ ಪ್ರಕ್ರಿಕೆಯಗಳನ್ನ ಪೂರ್ಣಗೊಳಿಸಲಾಗುವದು. ಅಲ್ಲಿವರೆಗೂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸದರ ನಗರಸಭೆಯ ಅಧಿಕಾರಭಾರ ಮತ್ತು ಯಾವುದೇ ಕಾರ್ಯ ಕಲಾಪಗಳನ್ನು ನಡೆಸುವಂತಿಲ್ಲ ಹಾಗೂ ಯಾವುದೇ ಪತ್ರಗಳಿಗೆ ಸಹಿ ಹಾಕುವಂತಿಲ್ಲ.”
ಗಂಗಪ್ಪ ಎಂ. ಚುನಾವಣಾಧಿಕಾರಿಗಳು