ಗದಗ: ತೀವ್ರ ಕುತೂಹಲ ಕೆರಳಿಸಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಾಕಷ್ಟು ಹೈಡ್ರಾಮಾ ಹಾಗೂ ಹಲವು ತಿರುಗಳ ನಡುವೆ ಪೂರ್ಣಗೊಂಡಿದೆ. ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ 16 ನೇ ವಾರ್ಡನ ಕಾಂಗ್ರೆಸ್ ಸದಸ್ಯರಾದ ಕೃಷ್ಣಾ ಪರಾಪೂರ, ಹಾಗೂ 4 ನೇ ವಾರ್ಡನ ಸದಸ್ಯರಾದ ಶಕುಂತಲಾ ಅಕ್ಕಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತವನ್ನ ತನ್ನ ತೆಕ್ಕೆಗೆ ಬಾಚಿಕೊಂಡಿದೆ.
ಇನ್ನು ಈ ವೇಳೆ ಭಾರಿ ಹೈಡ್ರಾಮಾವೇ ನಡೆದುಹೋಗಿದ್ದು, ನಗರಸಭೆ ಇಂದು ಗದ್ದಲ ಗಲಾಟೆಗಳ ಕೇಂದ್ರಬಿಂದುವಾಗಿ ಬದಲಾಗಿತ್ತು. ಬಿಜೆಪಿಯವರ ಪ್ರಕಾರ, ಕೋರ್ಟ್ ನಿಂದ ಚುನಾವಣೆ ಮುಂದೂಡಿಕೆಯಾಗಿದ್ರೂ, ಕಾನೂನುಬಾಹಿರವಾಗಿ ಚುನಾವಣೆ ನಡೆಸಲಾಗಿದೆ ಎಂದು ಸಾಕಷ್ಟು ಗದ್ದಲ ಗಲಾಟೆ ನಡೆಸಿದ ಘಟನೆಯೂ ನಡೆಯಿತು.ಇದೇ ವೇಳೆ ಅನರ್ಹಗೊಂಡ ಬಿಜೆಪಿಯ ಮೂವರು ಸದಸ್ಯರನ್ನ ನಗರಸಭೆ ಒಳಗಡೆ ಬಿಡದ ಕಾರಣ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತು.
ಇನ್ನೇನು ಚುನಾವಣೆ ಪ್ರಕ್ರಿಯೆ ಆರಂಭವಾಯಿತು ಅನ್ನುವಾಗಲೇ, ಚುನಾವಣೆ ಮುಂದೂಡಲಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರವಾಗಿ ಜೈಕಾರ ಕೂಗಿ, ಸಂಭ್ರಮಕ್ಕೆ ಮುಂದಾದರು. ಇನ್ನೇನು ಚುನಾವಣೆ ಅರ್ಧಕ್ಕೆ ನಿಲ್ಲಿಸಿ ಎಲ್ಲರೂ ಹೊರಗಡೆ ಬರುತ್ತಾರೆ ಎಂದು ನಗರಸಭೆ ಹೊರಗಡೆ ಕಾಯುತ್ತಿದ್ದ ಬಿಜೆಪಿ ಪಕ್ಷದವರಿಗೆ ಕೊನೆಗೆ ನಿರಾಸೆಯ ಫಲಿತಾಂಶ ಕಾದಿತ್ತು.

ಇದರ ಮಧ್ಯೆ ಸಂಸದ ಬಸವರಾಜ ಬೊಮ್ಮಾಯಿ ಸಹ ಚುನಾವಣಾ ಬಹಿಷ್ಕರಿಸಿ ಹೊರಗಡೆ ಬಂದು ಮಾಧ್ಯಮಗಳೆದುರು, ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಹೈಕೋರ್ಟ್ ಚುನಾವಣೆ ಮುಂದೂಡಿದೆ ಎಂದು ಆದೇಶಿಸಿದ್ದರೂ, ಕಾನೂನು ಬಾಹಿರವಾಗಿ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಹೀಗಾಗಿ ಇದರ ವಿರುದ್ಧ ನಾವೂ ಸಹ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಇನ್ನು ಬೊಮ್ಮಾಯಿ ಹೊರಬರುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲರೂ ಚುನಾವಣಾ ಬಹಿಷ್ಕರಿಸಿ ಹೊರಬಂದಿದ್ದರು. ಇದಾದ ಬಳಿಕ ಕಾಂಗ್ರೆಸ್ ತನ್ನ 18 ರ ಸಂಖ್ಯಾಬಲದೊಂದಿಗೆ ಕೈ ಎತ್ತುವ ಮೂಲಕ ಬಹುಮತ ಸಾಬೀತುಪಡಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತನ್ನದಾಗಿಸಿಕೊಂಡು, ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಿತು.
“ಕಾನುನು ಪ್ರಕಾರ ಚುನಾವಣೆ ನಡೆದಿದೆ.ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಸರಿಯಾಗಿ 2 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರನಡೆದರು. ಬಾಗಿಲು ಬಂದ್ ಮಾಡಿ ಅಧಿಕಾರಿಗಳು ಚುನಾವಣೆ ನಡೆಸಿದರು.ನಾನೂ ಸಹ ಒಬ್ಬ ಮತದಾರನಾಗಿ ಮತ ಚಲಾಯಿಸಿದ್ದೇನೆ. ಚುನಾವಣೆ ಮುಂದೂಡಿದ ಬಗ್ಗೆ ನನಗೆ ಮಾಹಿತಿ ಇಲ್ಲ.”
ಹೆಚ್.ಕೆ.ಪಾಟೀಲ. ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರು
” ಚುನಾವಣೆ ಪ್ರಕ್ರಿಯೆ ನಡೆಯುವಾಗ ಬಿಜೆಪಿ ಸದಸ್ಯರ ಆಕ್ಷೇಪಣೆಯಂತೆ, ಚುನಾವಣೆ ಮುಂದೂಡಿದೆ ಎನ್ನುವ ಹೈಕೋರ್ಟ್ ಸೂಚನೆಯ ಈಮೇಲ್ ನ್ನ ನಾನು ಚೆಕ್ ಮಾಡಿಸಿದೆ. ಆದರೆ ಯಾವುದೇ ಸೂಚನೆಯ ಮೇಲ್ ಬರದ ಹಿನ್ನೆಲೆ ನಾನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದ್ದೇನೆ. ಬಾಗಿಲು ಬಂದ್ ಮಾಡಿದ್ದರಿಂದ ಹಾಗೂ ಯಾವುದೇ ಸಂಹವನ ಇಲ್ಲದ ಕಾರಣ ಹೊರಗೆ ಯಾವ ಅಧಿಕಾರಿಗಳೂ ಬಂದ ಮಾಹಿತಿ ನನಗೆ ಬಂದಿಲ್ಲ.
ಗಂಗಪ್ಪ ಎಂ. ಉಪವಿಭಾಗಾಧಿಕಾರಿಗಳು. ಗದಗ
” ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನ ಹೈಕೋರ್ಟ್ ಮುಂದೂಡಿರುವ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ತಿಳಿಸಲು ಬಂದಿದ್ದೆ. ಆದರೆ ಅಷ್ಟೊತ್ತಿಗಾಗಲೇ ಚುನಾವಣೆ ಪ್ರಕ್ರಿಯೆ ಮುಗಿದು ಹೋಗಿತ್ತು.
ಅನ್ನಪೂರ್ಣ ಮುದಕಮ್ಮನವರ. ಅಪರ ಜಿಲ್ಲಾಧಿಕಾರಿಗಳು.
ಒಟ್ಟಾರೆ ಬಿಜೆಪಿ ತಾನೇ ಮಾಡಿದ ತಪ್ಪಿನಿಂದಾಗಿ ಬಹುಮತ ಇದ್ದರೂ ಕೂಡ ತನ್ನ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದಂತೂ ಸುಳ್ಳಲ್ಲ.ಮುಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಯಾವರೀತಿ ಕಾನೂನು ಹೋರಾಟ ನಡೆಸಲಿವೆ ಅನ್ನೋದು ಕಾದು ನೋಡಬೇಕು.