ಗದಗ:ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗದಗ ಬೆಟಗೇರಿ ನಗರಸಭೆಯ ಎರೆಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತಷ್ಟು ಹಾವು ಮುಂಗಸಿಯ ಕಾಳಗದ ಸ್ವರೂಪ ಪಡೆದಕೊಂಡಿದೆ.
ಮಹಲಿಂಗೇಶ್ ಹಿರೇಮಠ.
ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಬಿಜೆಪಿ ಸದಸ್ಯರಿಗೆ ಶಾಕ್ ಎದುರಾಗಿದೆ.ಹೌದು, ಈಗಾಗಲೇ ಸದಸ್ಯತ್ವ ರದ್ದಿನ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ನಗರಸಭೆ ಮೂವರು ಬಿಜೆಪಿ ಸದಸ್ಯರಿಗೆ ದೊಣ್ಣೆ ಏಟು ಜೋರಾಗಿಯೇ ಬಂದು ಅಪ್ಪಳಿಸಿದೆ.
ನಗರಸಭೆ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನೀಲ್ ಅಬ್ಬಿಗೇರಿ, ಹಾಗೂ ಗೂಳಪ್ಪ ಮುಶಿಗೇರಿ ಈ ಮೂವರ ಸದಸ್ಯತ್ವವನ್ನ ಮತ್ತೇ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ದಿ. 27-02-2025 ರಂದು ಆದೇಶ ಹೊರಡಿಸಿದ್ದಾರೆ.
ಇದರಿಂದ ದಿ.28-02-2025 ರಂದು ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮೂವರು ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಂತಾಗಿದೆ. ಇದರಿಂದ ಬಹುಮತದೊಂದಿಗೆ ನಗರಸಭೆ ಅಧಿಕಾರ ಈ ಬಾರಿಯೂ ನಮ್ಮದೇ ಎಂದು ಕನಸು ಕಾಣುತ್ತಿದ್ದ ಬಿಜೆಪಿ ಸದಸ್ಯರಿಗೆ ಒಂದೇ ರಾತ್ರಿಯಲ್ಲಿ ಕನಸು ಭಗ್ನಗೊಂಡಿದೆ. ಅಲ್ಲದೇ ಬಿಜೆಪಿ ಸದಸ್ಯರ ಸಂಖ್ಯಾಬಲ 15 ಕ್ಕೆ ಕುಸಿದಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯಾಬಲ 17 ಇರುವದರಿಂದ ಬಹುತೇಖವಾಗಿ ಎರಡನೇ ಅವಧಿಯ ನಗರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಕೈ ಸೇರುವದು ನಿಶ್ಚಿತವಾಗಿದೆ.
*ಒಂದೇ ರಾತ್ರಿಯಲ್ಲಿ ಬಿಜೆಪಿ ಕನಸು ಭಗ್ನ!*
ಇನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರ ಸದಸತ್ವ ರದ್ದತಿ ಆದೇಶಕ್ಕೂ ಕೆಲವೇ ಗಂಟೆಗಳ ಮುಂಚೆ (27-02-2025) ರಂದು ಬಿಜೆಪಿಯ ಮೂವರು ಸದಸ್ಯರಿಗೆ ಮತ್ತೊಮ್ಮೆ ಜಾಕ್ ಪಾಟ್ ಸಿಕ್ಕಂತಾಗಿತ್ತು.ಕಾರಣ (ದಿ.28-02-2025) ರಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಮತದಾನಕ್ಕೆ ಧಾರವಾಡ ಹೈಕೋರ್ಟ್ ಪೀಠ ಅವಕಾಶ ಕಲ್ಪಿಸಿತ್ತು. ಆದರೆ ಆದೇಶದ ಮೊದಲನೇ ಸಾಲಿನಲ್ಲಿಯೇ “ಪ್ರಾದೇಶಿಕ ಆಯುಕ್ತರು ಹೊರಡಿಸಿದ ಯಾವುದೇ ಆದೇಶಗಳಿಗೆ ಒಳಪಟ್ಟು” ಎನ್ನುವ ಸೂಚನೆ ನೀಡಿ ಚುನಾವಣೆಯಲ್ಲಿ ಭಾಗವಹಿಸಲು ಹಾಗೂ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿತ್ತು.
“W.P.No.101414/2025 ರಲ್ಲಿ ಅಂಗೀಕರಿಸಿದ 24.02.2025 ರ ರಿಮಾಂಡ್ ಆದೇಶದ ಅನುಸಾರವಾಗಿ ಪ್ರಾದೇಶಿಕ ಆಯುಕ್ತರು ಹೊರಡಿಸಿದ ಯಾವುದೇ ಆದೇಶಗಳಿಗೆ ಒಳಪಟ್ಟು 28.02.2025 ರಂದು ನಡೆಯುವ ಚುನಾವಣೆಯಲ್ಲಿ ಭಾಗವಹಿಸಲು ಮತ್ತು ಮತ ಚಲಾಯಿಸಲು ನಂ.7 ರಿಂದ 9 ರವರೆಗಿನ ಅರ್ಜಿದಾರರಿಗೆ ಅನುಮತಿಸಲಾಗಿದೆ.”

ಈ ರೀತಿಯಾಗಿ ನ್ಯಾಯಾಲಯ ಮೂವರು ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಇದರಿಂದ ಬಿಜೆಪಿ ಪಕ್ಷದ ಸದಸ್ಯರು ನಗರಸಭೆಯಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಸಜ್ಜಾಗಿದ್ದರು. ಆದರೆ ಅಷ್ಟೆಲ್ಲ ಕಸರತ್ತುಗಳ ನಡುವೆಯೂ ಇವರ ಕನಸು ಒಂದೇ ರಾತ್ರಿಯಲ್ಲಿ ಭಗ್ನಗೊಂಡಿತ್ತು.
ಯಾಕೆಂದರೆ ಮತದಾನಕ್ಕೆ ಅವಕಾಶ ನೀಡಿದೆ ಎನ್ನುವ ಸುದ್ದಿ ಹೊರಬಂದ ಕೆಲವೇ ಕೆಲವು ಗಂಟೆಗಳ ಕಳೆಯುವಷ್ಟರಲ್ಲಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಬಿಜೆಪಿ ಮೂವರು ಸದಸ್ಯರ ಸದಸ್ವತ್ವವನ್ನ ಮತ್ತೊಮ್ಮೆ ರದ್ದುಗೊಳಿಸಿದ ಆದೇಶದ ಪ್ರತಿ ಇವರ ಕೈಗೆ ಸೇರಿತ್ತು. ಆ ಮೂಲಕ ಮತ್ತೊಂದು ಆಘಾತಕಾರಿ ಬೆಳವಣಿಗೆ ಬಿಜೆಪಿ ಪಕ್ಷದ ಅಧಿಕಾರದ ಕನಸನ್ನ ಛಿದ್ರವಾಗಿಸಿತ್ತು.
*ಸದಸ್ಯತ್ವ ರದ್ದತಿ ಆದೇಶ ಪ್ರತಿಯಲ್ಲಿ ಏನಿದೆ*
“ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಆಧಾರದ ಮೇಲೆ, ಪ್ರಕರಣದಲ್ಲಿನ ಆಪಾದಿತರಾದ 1] ಶ್ರೀಮತಿ ಉಷಾ ದಾಸರ, ಮಾಜಿ ಅಧ್ಯಕ್ಷರು, 2] ಶ್ರೀ ಅನಿಲ್ ಎಂ.ಅಬ್ಬಿಗೇರಿ, ಸದಸ್ಯರು/ ಕೌನ್ಸಿಲರ ಹಾಗೂ 3] ಶ್ರೀ ಗುಳ್ಳಪ್ಪ ಎಸ್.ಮುಷಿಗೇರಿ, ಸದಸ್ಯರು/ಕೌನ್ಸಿಲರ ಗದಗ-ಬೆಟಗೇರಿ ನಗರಸಭೆ, ಜಿ:ಗದಗ ಇವರ ವಿರುದ್ಧ ಮಾಡಲಾದ ಆಪಾದನೆಗಳ ಮೇಲಿಂದ ಅಪಮಾನಕರ ವರ್ತನೆಯ ಬಗ್ಗೆ ತಪ್ಪಿತಸ್ಥನಾಗಿದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಕಲಂ 41(1) & (2) ರಂತೆ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: UDD/104/TMC 2014, ໖:09-01-2015 ರನ್ವಯ ಅವರನ್ನ ಅಧ್ಯಕ್ಷ/ಕೌನ್ಸಿಲರ್ ಪದದಿಂದ ತೆಗೆದುಹಾಕಿ ಆದೇಶಿಸಲಾಗಿದೆ.”

ಒಟ್ಟಾರೆ ಇಂದು ಮಧ್ಯಾಹ್ನ ಚುನಾವಣೆ ನಡೆಯಲಿದ್ದು, ಎರೆಡೂ ಪಕ್ಷಗಳೂ ಮುಂದೆ ಮತ್ತಾವ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತವೆಯೋ ಕಾದು ನೋಡಬೇಕು.
ಈಗಾಗಲೇ ಮೊದಲೇ ಹೇಳಿದಂತೆ “ನಗರಸಭೆ ಮೂವರು ಬಿಜೆಪಿ ಸದಸ್ಯರಿಗೆ ಸಿಕ್ಕಿತು ಮತದಾನಕ್ಕೆ ಅವಕಾಶ! ಏನಾಗಲಿದೆ ನಾಳೆ ಗದಗ ಬೆಟಗೇರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ?” ಅನ್ನುವ ಶೀರ್ಷಿಕೆಯಡಿ ನಿಮ್ಮ “ಸಿಟಿ ಎಕ್ಸಪ್ರೆಸ್” ನ್ಯೂಸ್ ನಿನ್ನೆ ರಾತ್ರಿಯಷ್ಟೇ ಬಿತ್ತರಿಸಿದ್ದ ಸುದ್ದಿಯಲ್ಲಿ ಮೂವರು ಸದಸ್ಯರ ಸದಸ್ವತ್ವ ಮರಳಿ ಸಿಕ್ಕರೂ, ಅದು ಎಲ್ಲಿಯವರೆಗೆ ಮುಂದುವರಿಯಲಿದೆ ಅನ್ನುವ ಸ್ಪಷ್ಟಚಿತ್ರಣ ಈವರೆಗೂ ಸಿಕ್ಕಿಲ್ಲ.ಕಾರಣ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಈ ವಿಚಾರಣೆ ಇನ್ನೂ ಬಾಕಿಯಿದೆ. ನಾಳೆ ಚುನಾವಣೆ ನಡೆದು ಬಹುಮತಗಳ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಆಯ್ಕೆಯಾಗುವ ತನಕ ಏನನ್ನೂ ತಳ್ಳಿ ಹಾಕುವಂತಿಲ್ಲ” ಎನ್ನುವ ಮುನ್ಸೂಚನೆ ಸಂದೇಶವನ್ನ “ಸಿಟಿ ಎಕ್ಸಪ್ರೆಸ್” ನ್ಯೂಸ್ ರಾತ್ರಿ ಪ್ರಕಟಿಸಿದ್ದ ಸುದ್ದಿಯಲ್ಲಿ ಮುಂಚಿತವಾಗಿಯೇ ನೀಡಿತ್ತು. ಇದೀಗ ಅದೇ ಪ್ರಕಾರ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಜಕೀಯದ ಹಾವು ಏಣಿ ಆಟ ಕೊನೆಗೂ ಸಾಬೀತಾಗಿದೆ.
