ಗದಗ: ಸರ್ಕಾರದ ಪಂಚ ಗ್ಯಾರಂಟಿ ಭರಾಟೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಬಹಳ ಮಂದಗತಿಯಲ್ಲಿ ಸಾಗಿದೆ ಎಂದು ವೀರಶೈವ ಪಂಚಪೀಠಗಳಲ್ಲೊಂದಾದ ಬಾಳೆಹೊನ್ನೂರು ಪೀಠದ ಶ್ರೀಮದ್ ಜಗದ್ಗುರು ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ
ಸಮಾರಂಭವೊಂದರಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಆಡಳಿತಾರೂಢ ಪಕ್ಷದಲ್ಲಿಯೇ ಪಂಚ ಗ್ಯಾರಂಟಿಗಳ ಬಗ್ಗೆ ಸಮಾಧಾನವಿಲ್ಲದಾಗಿದೆ. ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ರೂ ಸಮರ್ಪಕವಾದ ಫಲ ಜನ್ರಿಗೆ ಸಿಗುತ್ತಿಲ್ಲ ಅನ್ನೋ ಕೊರಗು ವಿರೋಧ ಪಕ್ಷದ ಶಾಸಕರಿಗೆ ಅಷ್ಟೇ ಅಲ್ಲ ಆಡಳಿತ ಪಕ್ಷದ ಶಾಸಕರಿಗೂ ಇದೆ ಎಂದು ತಿಳಿಸಿ, ಸರ್ಕಾರದ ಪಂಚಗ್ಯಾರಂಟಿಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.
ಕಟ್ಟಡ ಉದ್ಘಾಟನೆಗೆ ಬೇಸರಗೊಂಡ ಶ್ರೀಗಳು
ಇನ್ನು ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ಉದ್ಘಾಟನೆಗೆ ರಂಭಾಪುರಿ ಜಗದ್ಗುರುಗಳನ್ನೂ ಸಹ ಆಮಂತ್ರಿಸಲಾಗಿತ್ತು. ಆದರೆ ರಂಭಾಪುರಿ ಶ್ರೀಗಳು ಆಗಮಿಸುವದರ ಮುಂಚಿತವಾಗಿಯೇ, ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೊಳಿಸಲಾಗಿತ್ತು.
ಸಂಸದ ಜಗದೀಶ್ ಶೆಟ್ಟರ್, ಶಿರಹಟ್ಟಿ ಶಾಸಕ ಡಾ. ಶಾಸಕ ಚಂದ್ರು ಲಮಾಣಿ,ಮಾಜಿ ಶಾಸಕರಾದ ಜಿ.ಎಸ್.ಗಡ್ಡದ್ದೇವರಮಠ, ಗಂಗಣ್ಣ ಮಹಾಂತಶೆಟ್ಟರ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಅನುಪಸ್ಥಿತಿಯಲ್ಲೇ ಗ್ರಾಮ ಪಂಚಾಯತ ಕಟ್ಟಡವನ್ನ ಉದ್ಘಾಟನೆಗೊಳಿಸಿದ್ದರು.
ಜನಪ್ರತಿನಿಧಿಗಳು ತಮ್ಮ ಮುಂದಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ತರಾತುರಿಯಲ್ಲೋ ಅಥವಾ ಕಾರ್ಯಕ್ರಮ ಸಂಯೋಜಕರ ಸರಿಯಾದ ಸಂವಹನ ಕೊರತೆಯಿಂದಲೋ ಶ್ರೀಗಳು ಆಗಮಿಸುವ ಮುಂಚೆಯೇ ಅವರ ಅನುಪಸ್ಥಿತಿಯಲ್ಲಿ ಗ್ರಾಮ ಪಂಚಾಯತ ನೂತನ ಕಟ್ಟಡ ಉದ್ಘಾಟನೆಗೊಳಿಸಲಾಯಿತು ಎನ್ನಲಾಗಿದೆ.
ಇನ್ನು ನಂತರ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ರಂಭಾಪುರಿ ಶ್ರೀಗಳು, ಗ್ರಾಮ ಪಂಚಾಯತ ಉದ್ಘಾಟನೆ ವಿಚಾರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಅಡರಕಟ್ಟಿ ಗ್ರಾಮ ಬಹಳಷ್ಟು ಶಿಸ್ತಿನಿಂದ ಕಾರ್ಯಕ್ರಮ ನಡೆಸುವ ಗ್ರಾಮವಾಗಿದೆ.ಆದ್ರೆ ಇವತ್ತು ಎಲ್ಲವನ್ನು ಗಾಳಿಗೆ ತೂರಿ ಈ ರೀತಿ ಮಾಡಿದ್ದೀರಿ. ನಾವು ಎಷ್ಟೇ ಒತ್ತಡಗಳಿದ್ರೂ ಎಲ್ಲವನ್ನೂ ಬಿಟ್ಟು ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದ್ರೆ ಈ ವ್ಯವಸ್ಥೆ ನೋಡಿ ಮನಸ್ಸಿಗೆ ನೋವುಂಟು ಆಯಿತು ಎಂದರು.
ಯಾವುದೇ ಕಾರ್ಯಕ್ರಮ ರೂಪಿಸಬೇಕಾದ್ರೆ ಹಿರಿಯರು, ಗ್ರಾಮ ಪಂಚಾಯತ ಸದಸ್ಯರು ವಿಚಾರ ಮಾಡಿ ಶ್ರೀಗಳನ್ನ ಬರಮಾಡಿಕೊಳ್ಳಬೇಕು. ಇದರಿಂದ ಗ್ರಾಮಕ್ಕೂ ಶ್ರೇಯಸ್ಸು ಹಾಗೂ ಶ್ರೀಗಳಿಗೂ ಗೌರವ ತಂದುಕೊಡುತ್ತೆ ಎಂದು ಶ್ರೀಗಳ ಅನುಪಸ್ಥಿತಿಯಲ್ಲಿ ನಡೆದ ಗ್ರಾಮ ಪಂಚಾಯತ ಉದ್ಘಾಟನೆ ಕುರಿತು ಪೂಜ್ಯರು, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.