ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಟೈಟ್ ಸೆಕ್ಯೂರಿಟಿ ನಡುವೆಯೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ. ಮುಸುಕುಧಾರಿ ಖತರ್ನಾಕ ಗ್ಯಾಂಗ್ ಗದಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ.
ಒಂದೇ ರಾತ್ರಿಯಲ್ಲಿ ಐದಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಲೂಟಿ ಮಾಡಿರೋ ಘಟನೆ ಗದಗ ನಗರದ ಹಾತಲಗೇರಿ, ಕೆಸಿ ರಾಣಿ ರೋಡ, ಹಾಳಕೇರಿ ಮಠದ ಹತ್ತಿರ ಸೇರಿದಂತೆ ಹಲವಡೆ ನಡೆದಿದೆ.
ಕೆಸಿ ರಾಣಿ ರಸ್ತೆಯ ಕಾಮತ್ ಕಿರಾಣಿ, ಬಸವ ಜೌಷಧ ಅಂಗಡಿ, ಆನಂದ ಐಸ್ ಪ್ಯಾಲೇಸ್ ನಲ್ಲಿ ಹಣ ದೋಚಿ ಖದೀಮರು, ಅಮೃತ್ ಕಿರಾಣಿ, ವೀರಭದ್ರೇಶ್ವರ ಕಿರಾಣಿ ಸ್ಟೋರ್, ಮೊಬೈಲ್ ಅಂಗಡಿ, ಪಾನ್ ಶಾಪ್ ಅಂಗಡಿಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಫೆಬ್ರುವರಿ 16 ರಂದು ತಡರಾತ್ರಿ ಈ ಸರಣಿ ಕಳ್ಳತನ ನಡೆದಿದ್ದು, ಕಟ್ಟಿಗೆಯಿಂದ ಶೆಟರ್ ಮುರಿದು ಅಂಗಡಿಯಲ್ಲಿದ್ದ 25 ಸಾವಿರ ಹಣ ದೋಚಿ ಖದೀಮರು ಎಸ್ಕೇಪ್ ಆಗಿದ್ದಾರೆ.
ಆರು ಜನರನ್ನೊಳಗೊಂಡ ಈ ಮುಸುಕುಧಾರಿ ಗ್ಯಾಂಗ್ ಕಿರಾಣಿ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ, ಕಳ್ಳತನ ನಡೆಸಿದ್ದು, ಖದೀಮರ ಭಯಾನಕ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಗದಗ-ಬೆಟಗೇರಿ ಅವಳಿ ನಗರದ ಜನ್ರಲ್ಲಿ ಆತಂಕ ಮನೆ ಮಾಡಿದ್ದು ರಾತ್ರಿ 10.30 ಕ್ಕೆ ಅಂಗಡಿ ಮುಗ್ಗಟ್ಟು ಬಂದ್ ಆಗಿ ಅವಳಿ ನಗರ ಸ್ಥಬ್ದವಾಗುತ್ತೆ. ಇದನ್ನೆ ಬಂಡವಾಳ ಮಾಡಿಕೊಂಡು ನಡುರಾತ್ರಿ ಕಳ್ಳರು ಭರ್ಜರಿ ಎಂಟ್ರಿ ಕೊಟ್ಟು ಲೂಟಿ ನಡೆಸಿದ್ದಾರೆ ಎನ್ನಲಾಗ್ತಿದೆ.
ಹೀಗಾಗಿ ಬಡಾವಣೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.