ಗದಗ: ದೇಶದೆಲ್ಲೆಡೆ ಸದ್ಯ ಕುಂಭಮೇಳದ ಧಾರ್ಮಿಕ ಮಹಾಸಂಗಮದ ಜಾತ್ರೆ ಜೋರಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದು, ದೇಶ ವಿದೇಶವಲ್ಲಷ್ಟೇ ಅಲ್ಲದೇ, ಜಗತ್ತಿನ ಅನೇಕ ಗಣ್ಯರು, ಸಾಧುಸಂತರು, ರಾಜಕೀಯ ನಾಯಕರು ಎಲ್ಲರೂ ಸಹ ಕುಂಭಮೇಳದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಪೂರೈಕೆಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರದಲ್ಲಿ ಕುರ್ಚಿ ಗಲಾಟೆ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿಯಂತೂ ರಾಜಕೀಯ ನಾಯಕರು ಒಳಗೊಳಗೆ ಗುಂಪು ಕಟ್ಟಿಕೊಂಡು ತಮ್ಮದೇ ಆದ ರಾಜಕೀಯ ತಂತ್ರ ನಡೆಸುತ್ತಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ, ಸದ್ಯದ ಸರ್ಕಾರದಲ್ಲಿ ಎರೆಡೂವರೆ ವರ್ಷಕ್ಕೆ ಒಪ್ಪಂದವಾಗಿದ್ದು, ಇನ್ನುಳಿದ ಎರೆಡೂವರೆ ವರ್ಷ ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಅನ್ನೋ ಪವರ್ ಶೇರಿಂಗ್ ಮಂತ್ರ ಸರ್ಕಾರ ರಚನೆಯಾದಾಗಿನಿಂದಲೂ ಮೇಳೈಸುತ್ತಿದೆ. ಈಗಾಗಲೇ ಸಿದ್ಧರಾಮಯ್ಯರ ಮುಖ್ಯಮಂತ್ರಿ ಅವಧಿ ಎರೆಡೂವರೆ ವರ್ಷ ಸಮಿಪಿಸುತ್ತಿದೆ. ಹೀಗಾಗಿ ಸಿಎಂ ಸಿದ್ಧರಾಮಯ್ಯ ಎರೆಡೂವರೆ ವರ್ಷದ ಬಳಿಕವೂ ಮುಂದುವರೀತಾರಾ ಅಥವಾ ಡಿಕೆಶಿಗೆ ಬಿಟ್ಟು ಕೊಡ್ತಾರಾ ಅಥವಾ ಬೇರೆ ಇನ್ಯಾರಾದರೂ ಬೇರೆ ಅಸ್ತ್ರ ಪ್ರಯೋಗಿಸಿ, ಮೂರನೇ ವ್ಯಕ್ತಿ ಸಿಎಂ ಆಗ್ತಾರಾ ಅನ್ನೋ ಚರ್ಚೆ, ಚಟುವಟಿಕೆ ಪ್ರಸ್ತುತ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ.
ಇದೆಲ್ಲವನ್ನೂ ಮಾಸ್ ಲೀಡರ್ ಆಗಿರೋ ಸಿಎಂ ಸಿದ್ಧರಾಮಯ್ಯ ಫ್ಯಾನ್ಸ್ ಗಳು ಸೂಕ್ಷ್ಮವಾಗಿ ಗಮನಿಸ್ತಾನೆ ಇದಾರೆ. ಯಾಕಂದ್ರೆ ಸಿದ್ಧರಾಮಯ್ಯನವರಿಗೆ ಅದೆಂಥಹ ಅಭಿಮಾನಿ ಬಳಗ ಇದೆ ಅನ್ನೋದು ನಿಮಗೆಲ್ಲ ಗೊತ್ತಿರೋ ಸಂಗತಿ. ಹೀಗಿದ್ದೂ, ಸಿಎಂ ಫ್ಯಾನ್ಸ್ ಬಳಗ ಇಷ್ಟು ದಿನ ಎಲ್ಲಿಯೂ ಸಿಎಂ ಖುರ್ಚಿ ಬಗ್ಗೆ ಒಂದೇ ಒಂದು ಚಕಾರ ಎತ್ತಿದ್ದಿಲ್ಲ. ಆದರೆ ಇದೀಗ ಒಬ್ಬೊಬ್ಬರಾಗಿ ತಮ್ಮ ನಾಯಕನ ಪರ ನಿಲ್ಲೋಕೆ ಶುರು ಮಾಡಿದ್ದು, ಕಟ್ಟ ಕಡೆಯ ಸಾಮಾನ್ಯ ಅಭಿಮಾನಿಯೂ ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿ ಅಂತಾ ತಮ್ಮದೇ ಆದ ರೀತಿಯಲ್ಲಿ ತಮ್ಮ ಅಭಿಮಾನದ ಮೂಲಕ ಒತ್ತಾಯ ಮಾಡ್ತಿದ್ದಾರೆ.
ಇದಕ್ಕೆ ಸಾಕ್ಷಿ ಅನ್ನುವಂತೆ, ಸಿಎಂ ಸಿದ್ಧರಾಮಯ್ಯ ಅಭಿಮಾನಿಯೊಬ್ಬ, ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಸ್ನಾನ ಮಾಡಿ, ನಮ್ಮ ನಾಯಕ ಸಿಎಂ ಸಿದ್ಧರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಬೇಕು ಅಂತ ಭಾವಚಿತ್ರ ಹಿಡಿದು ಗಂಗಾ ನದಿಯಲ್ಲಿ ಮುಳಗೆದ್ದು, ವಿಶೇಷ ಪೂಜೆ ಸಲ್ಲಿಸೋ ಮೂಲಕ ತನ್ನ ಅಭಿಮಾನದ ಪ್ರಾರ್ಥನೆಯನ್ನ ವಿಶಿಷ್ಠ ರೀತಿಯಲ್ಲಿ ಸಲ್ಲಿಸಿದ್ದಾನೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಶಿವಕುಮಾರ ಯತ್ನಟ್ಟಿ ಅನ್ನೋ ಸಿದ್ಧರಾಮಯ್ಯನವರ ಅಭಿಮಾನಿ ಯುವಕ ಕುಂಭಮೇಳದಲ್ಲಿ ಈ ಪ್ರಾರ್ಥನೆ ಸಲ್ಲಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಅಗಿದೆ.