ಗದಗ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಗದಗ ನಗರಸಭೆ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ (ಇಂಜಿನಿಯರ) ಎಚ್. ಬಂಡಿವಡ್ಡರ ಅವರನ್ನು ಪೌರಾಡಳಿತ ನಿರ್ದೇಶನಾಲಯ ಸೇವೆಯಿಂದ ಅಮಾನತುಗೊಳಿಸಿ ಶುಕ್ರವಾರ ಸಂಜೆ ಆದೇಶಿಸಿದೆ.
ಇತ್ತೀಚೆಗೆ ಬಂಡಿವಡ್ಡರ ನಿವಾಸ, ಅವರ ಸಹೋದರರ ನಿವಾಸ, ಸೀಮೀಕೆರಿ ಗ್ರಾಮದ ಮನೆ, ತೋಟದ ಮನೆ ಸೇರಿ ಇತರೆಡೆ ಲೋಕಾಯುಕ್ತರು ದಾಳಿ ನಡೆಸಿದ್ದರು. ದಾಳಿ ವೇಳೆ ಶೇ.145 ರಷ್ಟು ಅಕ್ರಮ ಆಸ್ತಿ ಗಳಿಕೆಯನ್ನು ಲೋಕಯುಕ್ತರು ಪತ್ತೆ ಹಚ್ಚಿದ್ದರು. ಚರ, ಸ್ಥಿರ ಆಸ್ತಿಗಳ ಮೌಲ್ಯಕ್ಕೂ, ಬಂಡಿವಡ್ಡರ ಅವರ ಮೂಲ ಸಂಪಾದನೆಗೂ ವ್ಯತ್ಯಾಸ ಕಂಡು ಬಂದಿತ್ತು.

ಲೋಕಾ ಪರಿಶೀಲನೆಗೂ ಮುನ್ನ ಬಂಡಿವಡ್ಡರ ಅವರ ಆಸ್ತಿ ಮೌಲ್ಯ 1.50 ಲಕ್ಷ ರೂ ಇತ್ತು ಎಂದು ದಾಖಲೆ ಪುರಾವೆ ತಿಳಿಸಿವೆ. ಲೋಕಾ ಪರಿಶೀಲನೆ ಅಂತ್ಯಕ್ಕೆ 1.74 ಕೋಟಿ ಮೌಲ್ಯ ಕಂಡು ಬಂದಿದೆ. ಪರಿಶೀಲನೆ ಅವಧಿಯಲ್ಲಿ ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ 1.72 ಕೋಟಿ ಪತ್ತೆ ಆಗಿದ್ದು, ಆರೋಪಿತ ಬಂಡಿವಡ್ಡರ ಅವರ ಒಟ್ಟು ಆದಾಯ 86 ಲಕ್ಷ ಎಂದು ಲೋಕಾ ತನಿಖೆ ವೇಳೆ ಕಂಡು ಬಂದಿದೆ.
ಲೋಕಾ ದಾಳಿ ಹಿನ್ನೆಲೆ ಕರ್ನಾಟಕ ನಾಗರಿಕ ಸೆವಾ( ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) 1957ರ ನಿಯಮ 9/2/C ನಿಯಮದಂತೆ ಪೌರಾಡಳಿತ ಇಲಾಖೆ ಅಮಾನತು ಆದೇಶ ನೀಡಿದೆ. ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಗೆ ಕಿರಿಯ ಅಭಿಯಂತರ ಹುದ್ದೆಗೆ ಬಂಡಿವಡ್ಡರ ಅವರನ್ನು ವರ್ಗಾಯಿಸಿದೆ. ಅಮಾನತ್ತಿನ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಪರವಾನಿಗೆ ಇಲ್ಲದೇ ಕೇಂದ್ರಸ್ಥಾನ(ಇಳಕಲ್) ತೊರೆಯದಂತೆ ಆದೇಶದಲ್ಲಿ ತಿಳಿಸಿದೆ.