ನರಗುಂದ:ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಭಗವದ್ಗೀತೆಯಲ್ಲಿದೆ ಎಂದು ಪ.ಪೂಜ್ಯಶ್ರೀ ಅಭಿನವ ಯಚ್ಚರಸ್ವಾಮಿಗಳು ಹೇಳಿದರು.
ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀ ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 16ನೇ ಮಾಸಿಕ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ಮನಸ್ಸಿನ ವೇದನೆಗಳಿಗೆ ಮತ್ತು ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಎಲ್ಲಿಯೂ ಹೋಗಬೇಕಿಲ್ಲ ಭಗವದ್ಗೀತೆಯನ್ನು ನಿತ್ಯ ಓದಿದರೆ ಸಾಕು ಎಲ್ಲದಕ್ಕೂ ಉತ್ತರ ಸಿಗುತ್ತದೆ. ಭಗವದ್ಗೀತೆ ಎನ್ನುವುದು ಆತ್ಮ ಜ್ಞಾನದ ಕಾನೂನು ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಕರ್ಮಣ್ಯೇ ವಾದಿಕಾರಸ್ತೆ ಮಾ ಫಲೇಷು ಕದಾಚನಾ ಎನ್ನುವ ಶ್ಲೋಕ ಆಧಾರಿತವಾಗಿ ಪ್ರವಚನವನ್ನು ನೀಡಿದ ಆಧ್ಯಾತ್ಮ ಚಿಂತಕ ಪ್ರಭಾಕರ ಉಳ್ಳಾಗಡ್ಡಿ ಅವರು ಮಾತನಾಡಿ, ಭಗವದ್ಗೀತೆ ನೇರವಾಗಿ ಭಗವಂತನ ವಾಣಿಯಿಂದ ಬಂದದ್ದು ಜೀವನದ ಯುದ್ಧದಲ್ಲಿ ಗೆಲ್ಲುವ ಬಗೆಯನ್ನು ಭಗವಾನ್ ಶ್ರೀಕೃಷ್ಣ ಇದರಲ್ಲಿ ತಿಳಿಸಿದ್ದಾನೆ. ಹಾಗಾಗಿ ಪ್ರತಿಯೊಬ್ಬರು ಭಗವದ್ಗೀತೆಯನ್ನು ಪಠಿಸಲೇಬೇಕು ಎಂದರು.
ಅತಿಥಿ ಬಾಪುಗೌಡ ತಿಮ್ಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಖಾನಾಪೂರ ಗ್ರಾಮದ ಪ್ರಗತಿಪರ ರೈತ ವೆಂಕನಗೌಡ ಕಗದಾಳ, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ನಾಗನಗೌಡ ಕಗದಾಳ ಹಾಗೂ ಗಂಗಾಪೂರ ಗ್ರಾಮದ ಪ್ರಗತಿಪರ ರೈತ ಉಮೇಶಗೌಡ ಪಾಟೀಲ ಇವರುಗಳನ್ನು ಸನ್ಮಾನಿಸಲಾಯಿತು.
ಶಿವಾನುಭವ ಸೇವೆಯನ್ನು ಬೆಂಗಳೂರಿನ ಇಂಜಿನಿಯರ ರಾಮಕೃಷ್ಣ ಗಂಗೋಜಿ ಹಾಗೂ ಯೋಧರಾದ ಅಸುಂಡಿಯ ರಾಜಶೇಖರ ಏಳಝರಿ ನೆರವೇರಿಸಿದರು. ಶಿವಾನುಭವ ಗೋಷ್ಠಿಯಲ್ಲಿ ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಪಾಂಡುರಂಗ ಪತ್ತಾರ ಸೇರಿದಂತೆ ಅನೇಕರಿದ್ದರು, ಸುನೀಲ ಪತ್ತಾರ ನಿರೂಪಿಸಿದರು. ಮುತ್ತಣ್ಣ ಗುರುನಾಥವನವರ ವಂದಿಸಿದರು.