ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿನ ಬಡ್ಡಿ ಕುಳಗಳ ಮೇಲೆ ಗದಗ ಪೊಲೀಸರು ಕೋಳ ತೊಡಿಸಲು ಸಜ್ಜಾದ ಬೆನ್ನಲ್ಲೆ, ಬಡ್ಡಿದಂಧೆಕೋರರ ಅಕ್ರಮದ ಆಟ ಬಗೆದಷ್ಟು ಬಯಲಾಗಿದೆ.
ಆರೋಪಿ ಯಲ್ಲಪ್ಪ ಮಿಸ್ಕಿನ್, ಸೇರಿದಂತೆ ಐದು ಜನರನ್ನ ವಶಕ್ಕೆ ಪಡೆದಿದ್ದ ಪೊಲೀಸರು, ತನಿಖೆ ನಡೆಸಿ ಸಾಕಷ್ಟು ಪ್ರಮಾಣದ ಅಕ್ರಮ ಸಂಪತ್ತನ್ನ ಬಯಲಿಗೆಳೆದಿದ್ದಾರೆ.
ಬೆಟಗೇರಿಯ ಬಡ್ಡಿ ಬಕಾಸುರನ ಮನೆಯಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ. ಈ ಕುರಿತು ಗದಗ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ, ಮಾಹಿತಿ ನೀಡಿದ ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರು, ಒಟ್ಟು 4 ಕೋಟಿ 90 ಲಕ್ಷದ, 98 ಸಾವಿರ ರೂ.ಗಳನ್ನ ಜಪ್ತಿ ಮಾಡಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಯಲ್ಲಪ್ಪ ಮಿಸ್ಕಿನ್, ಸೇರಿದಂತೆ ಐದು ಜನರನ್ನ ವಶಕ್ಕೆ ಪಡೆದಿದ್ದು, ಅವರಿಂದ 992 ಗ್ರಾಂ ಚಿನ್ನ,
650 ಬಾಂಡ್, 04 ಬ್ಯಾಂಕ್ ಎಟಿಎಂ, 09 ಬ್ಯಾಂಕ್ ಪಾಸ್ ಬುಕ್,02 ಎಲ್ ಐ ಸಿ, ಬಾಂಡ್ ಹಾಗೂ ಅಕ್ರಮವಾಗಿ ಸಂಗ್ರಹಣೆ ಮಾಡಿದ 65 ಲೀಟರ್ ಮದ್ಯದ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಎರಡು ದಿನಗಳಿಂದ 13 ಕಡೆ ದಾಳಿ ನಡೆಸಿದ್ದ ಪೊಲೀಸರು ಅಪಾರ ಪ್ರಮಾಣದ ಅಸ್ತಿ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.
ಬೆಟಗೇರಿಯ ಅಶೋಕ ಭೋಜಪ್ಪ ಗಣಾಚಾರಿ ಈತನ ವಿರುದ್ಧ ದೂರು ನೀಡಿದ ಪ್ರಕಾರ, ಆರೋಪಿತನಾದ ಯಲ್ಲಪ್ಪ ತೇಜುಸಾ ಮಿಸ್ಕಿನ್ ಇವನು ಹಂತ ಹಂತವಾಗಿ 1 ಕೋಟಿ 93 ಲಕ್ಷ ಹಣವನ್ನು ಕೈಗಡ ಸಾಲವನ್ನು ಕೊಟ್ಟು ತನ್ನಿಂದಾ ಮರಳಿ 1 ಕೋಟಿ 40 ಲಕ್ಷ ಹಣವನ್ನು ವಸೂಲಿ ಮಾಡಿಕೊಂಡಿದ್ದನು. ಅಲ್ಲದೆ ತನ್ನ ಕೋಟ್ಯಂತರ ಆಸ್ತಿಯನ್ನು ತನಗೆ ಆರೋಪಿತರಾದ 1] ಯಲ್ಲಪ್ಪ ಮಿಸ್ಕಿನ್ 2] ವಿಕಾಶ ಮಿಸ್ಕಿನ್, 3] ಮಂಜು ಶ್ಯಾವಿ 4] ಈರಣ್ಣ ಬೂದಿಹಾಳ. 5] ಮೋಹನ್ ಇವರೆಲ್ಲರೂ ಹೆದರಿಸಿ, ಬೆದರಿಸಿ, ಕಿರುಕಳ ಕೊಟ್ಟು ಅವರ ಆಸ್ತಿಯನ್ನು ಮತ್ತು ಕಲ್ಯಾಣ ಮಂಟಪವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು.
ಅಲ್ಲದೆ ಇನ್ನುಳಿದ ಆಸ್ತಿಗೆ ಸಹ ಸಂಚಗಾರ ಕಾಗದಗಳನ್ನು ಮಾಡಿಸಿಕೊಂಡು ತನ್ನಿಂದಾ ಮತ್ತು ತನ್ನ ಮನೆಯ ಜನರಿಂದಾ ಪಡೆದುಕೊಂಡ ಚೆಕ್ಕುಗಳ ಮತ್ತು ಬಾಂಡಗಳ ಬಗ್ಗೆ ಹೆದರಿಸಿ ಬೆದರಿಸಿ ಅವುಗಳನ್ನು ಸಹ ಉಪಯೋಗಿಸಿಕೊಂಡು ದೂರುದಾರರಿಗೆ ಹಾಗೂ ಇನ್ನುಳಿದ ಜನರಿಂದಾ ಸಹ ವಸೂಲಿ ಮಾಡುತ್ತಾ ದೂರುದಾರನಿಗೆ ಹಾಗೂ ಜನರಿಗೆ ಮೋಸ, ವಂಚನೆ ಮಾಡಿದ ಕುರಿತು ಬೆಟಗೇರಿ ಪೊಲೀಸ್ ಠಾಣೆ ಗುನ್ನೆ ನಂಬರ: 15/2025 00: 336[2], 336[3], 318[4], 308 [2], 352, 351 [2] [3], 8/2 3[5] 2.2.2. 2023 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
*ಏನಿದು ಪ್ರಕರಣ*
ಎರಡು ದಿನಗಳ ಹಿಂದಷ್ಟೇ, ಸುಮಾರು 12 ಜನ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಸುಮಾರು 26 ಲಕ್ಷ ಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದ ಗದಗ ಪೊಲೀಸರು, ನಿನ್ನೆಯಷ್ಟೇ ಒಬ್ಬನೇ ವ್ಯಕ್ತಿಗೆ ಸೇರಿದ ಬಡ್ಡಿಕುಳನ ಮನೆ ಮೇಲೆ, ಸುಮಾರು 12 ಕಡೆ ದಾಳಿ ಮಾಡಿ ಕೋಟಿ ಕೋಟಿ ಹಣ ಜಪ್ತಿ ಮಾಡಿದ್ದರು. ಈ ಮೂಲಕ ಅಕ್ರಮ ಬಡ್ಡಿ ದಂಧೆಕೋರರರಿಗೆ ನಡುಕ ಹುಟ್ಟಿಸಿದ್ದರು.
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ ಮತ್ತು ಅವನ ಸಂಬಂಧಿಕರ ಮನೆ ಸೇರಿದಂತೆ 12 ಕಡೆ ದಾಳಿ ಮಾಡಿ 1.50 ಕೋಟಿ ಅಧಿಕ ಹಣ ಜಪ್ತಿ ಮಾಡಿದ್ದರು. ಜೊತೆಗೆ ಸಾಕಷ್ಟು ಚಿನ್ನಾಭರಣ ಹಾಗೂ ಅಡಮಾನದ ದಾಖಲೆಗಳನ್ನ ವಶಕ್ಕೆ ಪಡೆದಿದ್ದರು.ನಂತರ ನಿರಂತರ ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನ ವಶಪಡಿಸಿಕೊಂಡಿದ್ದಾರೆ.ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.