ಗದಗ: ಗದಗನಲ್ಲಿ ಪೊಲೀಸರು ಬಡ್ಡಿ ದಂಧೆಕೋರರಿಗೆ ಸರಿಯಾದ ಪಾಠ ಮಾಡ್ತಿದ್ದಾರೆ. ಗದಗನಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ. ಹೀಗಾಗಿ ಇವರ ಹಾವಳಿಗೆ ಬ್ರೇಕ್ ಹಾಕೋಕೆ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತುಕೊಂಡಿದೆ. ಎರಡು ದಿನಗಳ ಹಿಂದಷ್ಟೇ, ಸುಮಾರು 12 ಜನರಿಗೆ ಬಿಸಿ ಮುಟ್ಟಿಸಿದ್ದ ಖಾಕಿ, ಇದೀಗ ಗದಗನ ದೊಡ್ಡ ಬಡ್ಡಿ ಕುಳಕ್ಕೆ ಸೇರಿದ 12 ಕಡೆ ದಾಳಿ ಮಾಡಿ ಕಂತೆ ಕಂತೆ ಹಣ ಜಪ್ತಿ ಮಾಡಿದ್ದು, ಬಡ್ಡಿ ಕಿರುಕುಳ ಅನುಭವಿಸ್ತಿದ್ದ ಬಡಪಾಯಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ, ಸುಮಾರು 12 ಜನ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಸುಮಾರು 26 ಲಕ್ಷ ಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದರು. ಈಗ ಒಬ್ಬನೇ ವ್ಯಕ್ತಿಗೆ ಸೇರಿದ ಬಡ್ಡಿಕುಳನ ಮನೆ ಮೇಲೆ, ಸುಮಾರು 12 ಕಡೆ ದಾಳಿ ಮಾಡಿ ಕೋಟಿ ಕೋಟಿ ಹಣ ಜಪ್ತಿ ಮಾಡಿದ್ದಾರೆ.ಈ ಮೂಲಕ ಅಕ್ರಮ ಬಡ್ಡಿ ದಂಧೆಕೋರರರಿಗೆ ನಡುಕ ಹುಟ್ಟಿಸಿದ್ದಾರೆ. ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ ಮತ್ತು ಅವನ ಸಂಬಂಧಿಕರ ಮನೆ ಸೇರಿದಂತೆ 12 ಕಡೆ ದಾಳಿ ಮಾಡಿ 1.50 ಕೋಟಿ ಅಧಿಕ ಹಣ ಜಪ್ತಿ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಚಿನ್ನಾಭರಣ ಹಾಗೂ ಅಡಮಾನದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.

ಇನ್ನು ಮುಖ್ಯವಾಗಿ ಈತನ ಮೇಲೆ ದಾಳಿ ಮಾಡೋಕೆ ಕಾರಣ ಆತ ಸಾಲಗಾರರಿಗೆ ಕೊಡ್ತಿದ್ದ ಕಿರುಕುಳ. ಹೌದು ಯಲ್ಲಪ್ಪ ಮಿಸ್ಕಿನ್ ಗದಗ ಬೆಟಗೇರಿಯ ಹಲವಾರು ಜನರಿಗೆ ಅಕ್ರಮವಾಗಿ ಬಡ್ಡಿ ಹಣ ನೀಡಿ, ಬಡ್ಡಿಗೆ ಬಡ್ಡಿ ಹಾಕಿ ಸಾಕಷ್ಟು ಕಿರುಕುಳ ನೀಡ್ತಿದ್ದ ಎಂಬ ಆರೋಪ ಇದೆ. ಅದರಂತೆ ಅಶೋಕ ಗಣಾಚಾರಿ ಎಂಬುವರು ಈತ ಕೊಡ್ತಿದ್ದ ಕಿರುಕುಳದ ಬಗ್ಗೆ ಬೆಟಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ನೀಡಿರೋ ದೂರಿನ ಆಧಾರದ ಮೇಲೆ ಪೊಲೀಸರು ಸುಮಾರು 12 ತಂಡಗಳನ್ನ ರಚಿಸಿ,ಖಚಿತ ಮಾಹಿತಿ ಪಡೆದು ಯಲ್ಲಪ್ಪ ಮಿಸ್ಕಿನ್ ಮಾಡಿರೋ ಬೇನಾಮಿ ಆಸ್ತಿಗಳ ಮೇಲೂ ದಾಳಿ ಮಾಡಿದ್ದಾರೆ. ಸದ್ಯ ಪರಿಶೀಲನೆ ಮುಂದುವರೆದಿದ್ದು ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಇನ್ನು ಈ ಆಸಾಮಿಯ ಮೈತುಂಬ ಬರೀ ಬಡ್ಡಿಗೆ ಬಂದಿದ್ದ ಚಿನ್ನಾಭರಣಗಳನ್ನೇ ಹಾಕಿಕೊಂಡು ಮೆರದಾಡ್ತಿದ್ದನಂತೆ. ಈತನನ್ನ ನೋಡಿ ಅದೆಷ್ಟೋ ರೌಡಿಗಳು ಬಡ್ಡಿದಂಧೆಗೆ ಇಳಿದು ಅಕ್ರಮ ದಂಧೆ ನಡೆಸುತ್ತಿದ್ದರು ಅನ್ನೋ ಮಾತುಗಳು ಸಹ ಕೇಳಿಬರ್ತಿವೆ. ಸದ್ಯ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬಂತೆ ಅಸಾಮಿ ಪೊಲೀಸರ ಕಾರ್ಯಾಚರಣೆಯಲ್ಲಿ ತಗಲಾಕ್ಕೊಂಡಿದ್ದು, ಗದಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.