ಮುಂಡರಗಿ: ಗದಗ ಜಿಲ್ಲೆ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಆರಂಭವಾಗಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆ, ನಿನ್ನೆ ಅದ್ಧೂರಿ ರಥೋತ್ಸವ ಜರುಗಿದರೆ, ಇಂದು (11-02-2025) ಭಕ್ತರ ಭಕ್ತಿ ಪರಾಕಾಷ್ಠೆಯ ಜಂಗಮೋತ್ಸವ ನೆರವೇರಿತು. ಶ್ರೀ ಮನಿಪ್ರ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಸಾನಿಧ್ಯದಲ್ಲಿ ಹಾಗೂ ಶ್ರೀಮಠದ ಉತ್ತರಾಧಿಕಾರಿ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಜಿ ನೇತೃತ್ವ ವಹಿಸಿದ್ದರು.
ಲಿಂಗನಾಯಕನಹಳ್ಳಿ,ಕನಕಗಿರಿ, ಉತ್ತಂಗಿ, ಹೊಳಲು, ಹಿರೇಮಲ್ಲನಕೇರಿ, ಕುಕನೂರು,ಘೋಡಗೇರಿ ಸೇರಿದಂತೆ ಅನೇಕ ಮಠಾಧೀಶರು ಜಂಗಮೋತ್ಸವಕ್ಕೆ ಚಾಲನೆ ನೀಡಿದರು.

ನರಗುಂದ ವಿರಕ್ತಮಠದ ಶ್ರೀ ಮನಿಪ್ರ ಶಿವಕುಮಾರ ಮಹಾಸ್ವಾಮಿಗಳ ಜಂಗಮೋತ್ಸವವು ಸಹಸ್ರಾರು ಭಕ್ತರ ಜಯಘೋಶದ ನಡುವೆ ಅದ್ಧೂರಿಯಾಗಿ ನೆರವೇರಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರ ಶ್ರದ್ಧಾ ಭಕ್ತಿಯ ನಡುವೆ ಹಾಗೂ ವಾದ್ಯ ವೈಭವಗಳ ಮೂಲಕ ಸಾಗಿ ಶ್ರೀಮಠಕ್ಕೆ ತಲುಪಿತು.
ಈ ವೇಳೆ ಸಹಸ್ರಾರು ಭಕ್ತಾಧಿಗಳು ಸ್ವಾಮಿಜಿಗಳಿಗೆ ಹೂಮಾಲೆ, ಕಾಯಿ,ಹಣ್ಣು,ಉತ್ತತ್ತಿ ಕೊಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿ, ಪೂಜ್ಯರಿಂದ ಆಶಿರ್ವಾದ ಪಡೆದುಕೊಂಡರು.
ನಂದಿಕೋಲು ಮೇಳ,ಡೊಳ್ಳು ಕುಣಿತ, ಕೀಲುಗೊಂಬೆ ಕುಣಿತ ಸೇರಿದಂತೆ ಅನೇಕ ವಾದ್ಯಮೇಳಗಳು ಜಂಗಮೋತ್ಸವದಲ್ಲಿ ಪಾಲ್ಗೊಂಡಿದ್ದವು.