ಗದಗ: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ಸೇರಿದಂತೆ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲರ ತವರು ಜಿಲ್ಲೆಯಲ್ಲಿಯೇ ಬಡ್ಡಿ ದಂಧೆಕೋರರಿಗೆ ಕಡಿವಾಣ ಬಿದ್ದಂತಿಲ್ಲ.
ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ (09-02-25) ಅವಳಿ ನಗರ ಗದಗ ಬೆಟಗೇರಿಯಲ್ಲಿ ಬಡ್ಡಿದಂಧೆಕೋರರ ಮನೆ ಮೇಲೆ ಪೊಲೀಸರು ದೀಢೀರ್ ದಾಳಿ ನಡೆಸಿದ್ದಾರೆ.
ಬಡ್ಡಿ ದಂಧೆ ನಡೆಸುತ್ತಿದ್ದ ಹಾಗೂ ಸಹಾಯ ಮಾಡುತ್ತಿದ್ದ ಒಟ್ಟು ಒಂಬತ್ತು ಜನರ ವಶಕ್ಕೆ ಪಡೆಯಲಾಗಿದ್ದು,ಮೀಟರ್ ಬಡ್ಡಿ ದಂಧೆಕೋರರಿಗೆ ಬೆಳ್ಳಂಬೆಳಗ್ಗೆ ಗದಗ ಬೆಟಗೇರಿ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಪೊಲೀಸರ ದಾಳಿಯಿಂದ ನಿದ್ದೆಯಲ್ಲಿದ್ದ ಬಡ್ಡಿ ದಂಧೆಕೋರರು ಕಂಗಾಲಾಗಿದ್ದಾರೆ.
ದಾಳಿ ವೇಳೆ ಬಡ್ಡಿ ದಂಧೆಕೋರರ ಮನೆಗಳಲ್ಲಿ ಲಕ್ಷಾಂತರ ಹಣದ ಕಂತೆ ಕಂತೆ ನೋಟ್ ಗಳು, ಬಾಂಡ್, ಖಾಲಿ ಚೆಕ್ ಗಳು ಸೇರಿದಂತೆ ಅನೇಕ ದಾಖಲೆಗಳು ಪತ್ತೆಯಾಗಿವೆ.
ಇನ್ನು ಸಂಗಮೇಶ ದೊಡ್ಡಣ್ಣವರ ಮನೆಯಲ್ಲಿ 26 ಲಕ್ಷ 57 ಸಾವಿರ ಲಕ್ಷ ನಗದು, ಖಾಲಿ ಬಾಂಡ್, ಚೆಕ್ ಗಳು ಪತ್ತೆಯಾಗಿದ್ದು, ರವಿ ಕೌಜಗೇರಿ ಮನೆಯಲ್ಲಿ ಚೆಕ್ ಗಳು, ಬಾಂಡ್, ಪೇಪರ್ಸ್, ಹಣ ಎಣಿಸುವ ಮಷಿನ್ ಕೂಡ ಪತ್ತೆಯಾಗಿವೆ.
ಅವಳಿ ನಗರದ 12 ಕಡೆಗಳಲ್ಲಿ ಏಕಕಾಲಕ್ಕೆ ಈ ದಾಳಿ ನಡೆಸಲಾಗಿದ್ದು, ಬಿಎನ್ಎಸ್ ಹಾಗೂ ಸೆಕ್ಯುರಿಟಿ ಪ್ರೋಸಿಡಿಂಗ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ತಿಳಿಸಿದ್ದಾರೆ.
ಕೆಲವು ರೆಜಿಸ್ಟರ್ ಮಾಡಿ ವ್ಯವಹಾರ ನಡೆಸಿದ್ದರೆ, ಇನ್ನೂ ಕೆಲವರು ಅನಧಿಕೃತವಾಗಿ ಈ ದಂಧೆಯಲ್ಲಿದ್ದಾರೆ. ಧಮ್ಕಿ, ಬೆದರಿಕೆ ಹಾಕಿ ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಈ ಬಡ್ಡಿ ದಂಧೆಯಲ್ಲಿ ರೌಡಿ ಶೀಟರ್ ಗಳು ಸಹ ಭಾಗಿಯಾಗಿದ್ದಾರೆ.
ದರ್ಶನ್ , ಉಮೇಶ್ ಸುಂಕದ, ಉದಯ ಸುಂಕದ ಮಾರುತಿ ಮುತಗಾರ, ಶಿವರಾಜ್ ಹಂಸನೂರ, ವಿಜಯ ಸೋಳಂಕಿ, ಶ್ಯಾಮ್ ಕುರಗೋಡ ಅನ್ನೋ ರೌಡಿ ಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗದಗ ಶಹರ, ಬೆಟಗೇರಿ, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಸಿಪಿಐಗಳಾದ ಧೀರಜ್ ಸಿಂಧೆ, ಡಿ ಬಿ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.