ಗದಗ: ಇಷ್ಟು ದಿನಗಳ ಕಾಲ ರಾಮುಲು ಸುಮ್ಮನಿದ್ರು..ಸುಮ್ಮನಿದ್ರು..ಅಂತ ಹೇಳತಿದ್ರು. .ಇನ್ಮುಂದೆ ಸುಮ್ಮನೆ ಇರೋದು ಏನೂ ಇಲ್ಲ…ಇನ್ಮುಂದೆ ನಾನೂ ಕೂಡ ಮಾತನಾಡೋನೆ, ಏನಿದೆಯೋ ಅದೆಲ್ಲವನ್ನೂ ಮಾತನಾಡೋದೆ..ಯಾರದೇ ಮುಲಾಜೆನಿಲ್ಲ.ಇಷ್ಟು ದಿನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತ ಸುಮ್ನೆ ಇದ್ವಿ..ಆದರೆ ನಮ್ಮಂಥವರನ್ನೂ ಅಪಮಾನ ಮಾಡುವ ಕೆಲಸ ನಡಿತೀರಬೇಕಾದ್ರೆ ನಾವೂ ಸಹ ಬೀದಿಗಿಳಿದು ಮಾತನಾಡುವ ಮಂದಿನೇ..ಯಾವ ಲೆಕ್ಕನೂ ಮಾಡಲ್ಲ..
ಅಬ್ಬಬ್ಬಾ..! ಹೀಗೆ ಕಡ್ಡಿ ತುಂಡಾದಂತೆ ಕಾರವಾಗಿ ಕೆಂಡವಾಗಿದ್ದು ಬೇರೆ ಯಾರೂ ಅಲ್ಲ. ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು..ಹೌದು ಗದಗನಲ್ಲಿ ಶ್ರೀರಾಮುಲು ನಿವಾಸ ಇಂದು ಮತ್ತೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹಾಗೂ ಸದ್ಯ ಪಕ್ಷದಲ್ಲಿ ಬುಸುಗುಡುತ್ತಿರೋ ಮಾಜಿ ಸಚಿವ ಶ್ರೀರಾಮುಲು ಗುಪ್ತವಾಗಿ ಸಭೆ ನಡೆಸಿದ್ದಾರೆ. ಗದಗನ ಶ್ರೀರಾಮುಲು ಮನೆಯಲ್ಲಿ ಟೀ ಹೆಸರಲ್ಲಿ ಈ ಇಬ್ಬರೂ ನಾಯಕರು ಕೆಲಹೊತ್ತು ಮಿಟಿಂಗ್ ನಡೆಸಿದ್ದು, ಸದ್ಯದ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳ ನಡುವೆಯೇ ಇವರಿಬ್ಬರ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಗುಪ್ತಸಭೆ ಬಳಿಕ ಇಬ್ಬರೂ ನಾಯಕರು ಒಟ್ಟಿಗೆ ಹೊರಬಂದಿದ್ದು, ಶ್ರೀರಾಮುಲು ಅವರನ್ನ ಪ್ರಧಾನ ಕಾರ್ಯದರ್ಶಿ ರಾಜೀವ್ ಅವರು ಸಮಾಧಾನ ಮಾಡೋಕೆ ಬಂದಿದ್ರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಇನ್ನು ಈ ವೇಳೆ, ಮಾಧ್ಯಮದವರ ಪ್ರಶ್ನೆಗೆ ಕಾರವಾಗಿಯೇ ಉತ್ತರಿಸಿದ ಶ್ರೀರಾಮುಲು, ಪಕ್ಷದಲ್ಲಿ ತಮ್ಮನ್ನ ನಡೆಸಿಕೊಳ್ಳುತ್ತಿರುವದರ ಬಗ್ಗೆ ಆಕ್ರೋಶದಿಂದಲೇ ತಮ್ಮ ಉತ್ತರವನ್ನ ಹೊರಹಾಕಿದ್ರು. ನಾನಿನ್ನು ಮುಂದೆ ಏನೇ ಇದ್ರೂ ಕೂಡ ಜನರ ಜೊತೆ ಮಾತನಾಡುತ್ತೇನೆ. ಇಷ್ಟು ದಿನಗಳ ಕಾಲ ಮಾತನಾಡಿಲ್ಲ.ಈಗ ಮಾತನಾಡುವ ಕೆಲಸ ಮಾಡ್ತೇನೆ. ಇಷ್ಟು ದಿನ ನಾನು ಮಾತನಾಡಿಲ್ಲ ಅಂದ್ರೆ, ಅದನ್ನ ನನ್ನ ಒಳ್ಳೆತನವನ್ನ ದೌರ್ಬಲ್ಯ ಅಂತ ತಿಳಿದುಕೊಳ್ಳಬಾರದು. 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಬುದ್ಧಿವಂತ ಇದ್ದೇನೆ. ಯಾರು ಏನು ಎತ್ತ ಅಂತ ತೂಕ ಹಾಕುವಂಥ ಶಕ್ತಿ ನನಗಿದೆ. ನಮಗೆಲ್ಲರಿಗೂ ಪಕ್ಷವೇ ತಾಯಿ ಇದ್ದ ಹಾಗೆ.ಆ ತಾಯಿಗೆ ಸಮಾನವಾದಮಥ ಸ್ಥಾನ ಯಾರೂ ತುಂಬಲಿಕ್ಕಾಗುವದಿಲ್ಲ. ಪಕ್ಷವನ್ನ ಬಿಡುವ ಮಾತೇ ಇಲ್ಲ. ಪಕ್ಷದಲ್ಲಿದ್ದುಕೊಂಡೇ ನಾವು ಸಂಘಟನೆಯನ್ನ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ರು.

ಗದಗ ಮಾತ್ರವಲ್ಲದೇ ರಾಜ್ಯದಲ್ಲಿ ಎಲ್ಲಿಯೇ ಆದ್ರೂ ಶ್ರೀರಾಮುಲು ಚುನಾವಣೆಗೆ ನಿಲ್ಲಬೇಕೆಂಬುದು ಜನರ ಆಸೆ ಇದೆ. ಆದರೆ ಕೆಲವು ಕಿಡಿಗೇಡಿಗಳು, ಅಂದರೆ ನಿನ್ನೆ ಮೊನ್ನೆ ಲೀಡರ್ ಆಗಿರುವ ಹಾಗೂ ಬಾಯಿ ಚಪಲಕ್ಕೆ ಮಾತನಾಡುವವ ಕಿಡಿಗೇಡಿಗಳು ಎಲ್ಲೋ ಒಂದು ಕಡೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ.ರಾಮುಲು ಏನು ಅಂತ ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದ್ರು.
ಇನ್ನು ಯತ್ನಾಳ & ಟೀಂ ದೆಹಲಿ ಭೇಟಿ ಬಗ್ಗೆ ಉತ್ತರಿಸಿದ ಶ್ರೀರಾಮುಲು, ಅವರ ಅನಿಸಕೆಗಳನ್ನ ಹೇಳಿಕೊಳ್ಳಲು ರಾಷ್ಟ್ರೀಯ ನಾಯಕರ ಬಳಿ ತೆರಳಿದ್ದಾರೆ. ರಾಷ್ಟ್ರೀಯ ನಾಯಕರ ಕೈಯಲ್ಲಿ ಮೂಗುದಾಣ ಇರುತ್ತೆ. ಹೀಗಾಗಿ ಬರುವ ದಿನಗಳಲ್ಲಿ ಯಾರ ಯಾರ ಸಾಮರ್ಥ್ಯ ಎಷ್ಟು ಅನ್ನೋದನ್ನ ರಾಷ್ಟ್ರೀಯ ನಾಯಕರು ಕಂಡು ಹಿಡಿಯಬೇಕು. ಯಾಕೆಂದರೆ, ಕೆಲವು ಜನ ಎಲ್ಲಿಯೂ ಹೊರಗೆ ಹೋಗಲಾರದೇ, ಕೇವಲ ಮಾತನಾಡುವ ಮೂಲಕ ದೊಡ್ಡ ನಾಯಕರಾಗಿ ಬಿಂಬಿಸಿಕೊಂಡುಬಿಟ್ಟಿದ್ದಾರೆ. ಅಂಥವರ ಬಗ್ಗೆ ಕಿವಿ ಕೊಟ್ಟು ಕೇಳೋದನ್ನ ರಾಷ್ಟ್ರೀಯ ನಾಯಕರು ಬಿಡಬೇಕಾಗಿದೆ. ಯಾರು ಫೀಲ್ಡಲ್ಲಿ ಕೆಲಸ ಮಾಡ್ತಾರೋ ಅಂಥವರನ್ನ ಗುರುತಿಸುವ ಕೆಲಸ ಮಾಡಬೇಕು.
ರಾಜಕಾರಣದಲ್ಲಿ 7-8 ಪರ್ಸೆಂಟನಲ್ಲಿ ಯಾರೇ ಸೋತಿರಬಹುದು. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಜನರನ್ನ ಸೆಳೆಯಬೇಕಾದರೆ ಈ 7-8 ಪರ್ಸೆಂಟ್ ದೊಡ್ಡದಲ್ಲ. ಅಂಥಹ ವ್ಯಕ್ತಿಗಳನ್ನ ಗುರುತಿಸುವ ಕೆಲಸ ಆಗಬೇಕಾಗಿದೆ. ಆ ರೀತಿ ಇದ್ದಲ್ಲಿ ಮುಂಬರುವ 2028 ರಲ್ಲಿ ಪಕ್ಷ ಅಧಿಕಾರ ಪಡೆಯುವಂತಾಗುತ್ತೆ. ಹೀಗಾಗಿ ಪಕ್ಷದಲ್ಲಿನ ಯಾವುದೇ ಭಿನ್ನಮತಗಳನ್ನ ಸರಿಪಡಿಸಬೇಕೆಂದರೆ ರಾಷ್ಟ್ರೀಯ ನಾಯಕರು ಮಾತ್ರ. ಯಾರು ಕೆಲಸ ಮಾಡುತ್ತಾರೋ ಅವರಿಗೆ ಆತಿಥ್ಯ ಕೊಡಬೇಕು, ಗೌರವ ಕೊಡಬೇಕು ಎಂದು ತಮಗೆ ಪಕ್ಷದಲ್ಲಾಗುತ್ತಿರುವ ಅಪಮಾನದ ಕುರಿತು ಮತ್ತೊಮ್ಮೆ ಪುನರುಚ್ಚರಿಸಿದರು.
ನಾನೂ ಸಹ ಇಂದಲ್ಲ ನಾಳೆ ರಾಷ್ಟ್ರೀಯ ನಾಯಕರ ಭೆಟಿ ಆಗುತ್ತೆನೆ. ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಹೇಳುತ್ತೇನೆ. ರಾಮುಲು ಎಂದಿಗೂ ಸಹ ಬಿಜೆಪಿ ಪಕ್ಷವನ್ನ ಬಿಟ್ಟು ಹೋಗಲ್ಲ ಅನ್ನೋದು ರಾಜ್ಯದ ಜನರೆಲ್ಲರಿಗೂ ಗೊತ್ತಿದೆ. ಇವತ್ತು ಶ್ರೀರಾಮುಲು ಒಳ್ಳೆ ವ್ಯಕ್ತಿ ಆಗಿರೋ ಕಾರಣ ಕಾಂಗ್ರೆಸ್ ನವರು ತಮ್ಮ ಪಕ್ಷಕ್ಕೆ ಕರೆದರೂ ಕರೆದಿರಬಹುದು. ಆದರೆ ಹೋಗೋದು ಬಿಡೋದು ನನಗೆ ಬಿಟ್ಟಿದ್ದು. ನಾನು ಹೋಬೇಕೆಂದರೆ ನನ್ನನ್ನು ತಡೆಯೋಕಾಗುತ್ತಾ..ನನ್ನನ್ನು ಜೈಲಿನಲ್ಲಿಡೋಕಾಗುತ್ತಾ ? ಯಾರಿಗೂ ಆಗೋಲ್ಲ..ಇವತ್ತಿನ ಕಾಲದಲ್ಲಿ ಯಾರು ಯಾರ ಮಾತನ್ನೂ ಕೇಳೋದಿಲ್ಲ. ಆದರೆ ನನ್ನ ಮನಸ್ಥಿತಿಯನ್ನ ಭಾರತೀಯ ಜನತಾ ಪಾರ್ಟಿ ಅರ್ಥ ಮಾಡಿಕೊಳ್ಳಬೇಕು.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಮೋದಿ ಸರ್ಕಾರ ಪೂರ್ಣ ಬಹುಮತದಿಂದ ಆರಿಸಿ ತರಬೇಕೆಂದರೆ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಹಾಗೆ ಕೆಲಸ ಮಾಡಬೇಕೆಂದರೆ ಈಗಿನ ಪರಿಸ್ಥಿತಿಯಲ್ಲಿ ನಮಗೆ ಕಾನ್ಫಿಡೆನ್ಸ್ ಹಾಗೂ ಆಕ್ಸಿಜನ್ ಅವಶ್ಯಕತೆ ಇದೆ. ಈ ಎಲ್ಲಾ ಎನರ್ಜಿಯನ್ನ ನಮ್ಮ ರಾಷ್ಟ್ರೀಯ ನಾಯಕರು ತುಂಬಬೇಕಾಗಿದೆ. ಇದೆಲ್ಲವೂ ಆಗದೇ ಹೋದಲ್ಲಿ ನಮ್ಮ ಶಕ್ತಿ ಪ್ರದರ್ಶನಕ್ಕೆ ನಾವು ಮುಂದಾಗಬೇಕಾಗುತ್ತೆ ಅನ್ನೋ ಮಾತನ್ನ ರಾಮುಲು ರಾಷ್ಟ್ರೀಯ ನಾಯಕರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟರು.
ಒಟ್ಟಾರೆ ಗದಗನಲ್ಲಿನ ಇವತ್ತಿನ ಶ್ರೀರಾಮುಲು ಅವರ ಘರ್ಜನೆ, ರಾಷ್ಟ್ರೀಯ ನಾಯಕರು ಮಧ್ಯಸ್ಥಿಕೆ ವಹಿಸಿ ಪಕ್ಷದಲ್ಲಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ನಮ್ಮನ್ನ ಯಾರೂ ತಡೆಯೋಕಾಗೋಲ್ಲ..ನಾವು ಯಾರ ಮಾತಿಗೂ ಜಗ್ಗಲ್ಲ..ಬಗ್ಗಲ್ಲ..ಅನ್ನೋ ಎಚ್ಚರಿಕೆ ಸಂದೇಶವನ್ನ ಹೈಕಮಾಂಡ್ ಗೆ ಎಚ್ಚರಿಕೆ ಕೊಟ್ಟಂತೆ ಇತ್ತು ಅಂದರೆ ತಪ್ಪಾಗಲಾರದು.