ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ್ದಾರೆ. ತಮ್ಮ ಎಂಟನೇ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕಾರ್ಯಕ್ರಮವು ಭಾರತ್‌ನೆಟ್ ಯೋಜನೆಯ ಭಾಗವಾಗಿರುತ್ತದೆ.ಈಗಾಗಲೇ ಡಿಸೆಂಬರ್ 2024 ರ ಹೊತ್ತಿಗೆ, 6.92 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ, 2.14 ಲಕ್ಷ ಗ್ರಾಮ ಪಂಚಾಯಿತಿಗಳು ಈಗ ಈ ಸೇವೆಗೆ ಸಿದ್ಧವಾಗಿವೆ. ಇದು ದೂರದ ಪ್ರದೇಶಗಳಿಗೆ ತುಂಬಾ ಉಪಕಾರಿ ಆಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರಾಡ್ ಬ್ಯಾಂಡ್ ಸಂಪರ್ಕ ಸೇರಿದಂತೆ ಶಿಕ್ಷಣ ವಲಯಕ್ಕೆ ಹಲವು ಮಹತ್ವದ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸುವುದಾಗಿಯೂ ನಿರ್ಮಲಾ ಅವರು ಹೇಳಿದ್ದಾರೆ.