ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗದಗ ಜಿಲ್ಲಾ & ಸತ್ರ ನ್ಯಾಯಾಲಯ ಪ್ರಕರಣವನ್ನ ಸಾಬೀತುಪಡಿಸಿ, ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ನಡುಬೀದಿಯಲ್ಲಿಯೇ ಚಾಕು, ಚೂರಿ, ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ರಮೇಶ ಮಾದರ ಮತ್ತು ಗಂಗವ್ವ ರಾಠೋಡ್ ಪ್ರೀತಿಸಿ ಮದುವೆಯಾಗಿದ್ದರು.ಇವರಿಬ್ಬರನ್ನು 2019 ರ ನವಂಬರ್ 6 ರಂದು, ಗಂಗವ್ವ ಕುಟುಂಬಸ್ಥರು ಕೊಲೆ ಮಾಡಿದ್ದರು. ಕುಟುಂಬಸ್ಥರ ವಿರೋಧದ ನಡುವೆ ಗಂಗವ್ವ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮಳ ಸಂಬಂಧಿಕರು ಕೊಲೆ ಮಾಡಿದ್ದರು.ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಗವ್ವ ರಾಠೋಡ್ (24) ಬಂಜಾರಾ ಸಮುದಾಯದವಳಾಗಿದ್ದು,ರಮೇಶ್ ಮಾದರ್ (28) ಮಾದಿಗ ಸಮುದಾಯದವನಾಗಿದ್ದನು. ಅಪರಾಧಿಗಳಾದ ಶಿವಪ್ಪ, ಪರಶುರಾಮ್ ರಾಠೋಡ್ ಗಂಗವ್ವಳ ಚಿಕ್ಕಪ್ಪಂದಿರಾಗಿದ್ದು, ರವಿ, ರಮೇಶ್ ಅನ್ನೋರು ತಮ್ಮಂದಿರಾಗಿದ್ದರು.
2017 ಎಪ್ರೀಲ್ 2 ರಂದು ಗಂಗವ್ವ ಹಾಗೂ ರಮೇಶ್ ರಿಜಿಸ್ಟರ್ ಮದ್ವೆಯಾಗಿದ್ರು. ದೀಪಾವಳಿ ಹಬ್ಬಕ್ಕೆಂದು 2019 ರಲ್ಲಿ ಲಕ್ಕಲಕಟ್ಟಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಚಾಕು, ಪಳಿ, ಕಲ್ಲುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಅಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಬೆಂಗಳೂರಿನ ಇಂದಿನ ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಷಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಐಪಿಸಿ 427, 449, 302, 506 (2) ಅಡಿಯಲ್ಲಿ ನ್ಯಾಯಾಲಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಇದೀಗ ನಾಲ್ವರಿಗೆ ಮರಣದಂಡನೆ ವಿಧಿಸಿದೆ.
ಅಪರಾಧಿಗಳಾದ ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡ ಸೇರಿದಂತೆ ಈ ನಾಲ್ವರಿಗೂ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.