ಮೌನಿ ಅಮಾವಾಸ್ಯೆಯಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಾಂತರ ಜನರು ಜಮಾಯಿಸಿದ್ದರಿಂದ ಬುಧವಾರ ಬೆಳಿಗ್ಗೆ ಪ್ರಯಾಗ್ರಾಜ್ನ ಸಂಗಮದಲ್ಲಿ ಗೊಂದಲ ಉಂಟಾಯಿತು. ದೊಡ್ಡ ಜನಸಮೂಹವು ಕಾಲ್ತುಳಿತಕ್ಕೆ ಕಾರಣವಾಗಿದೆ ಯಂದು ತಿಳಿದುಬಂದಿದೆ. ಈ ಕಾಲ್ತುಳಿತದಲ್ಲಿ ಸುಮಾರು 15 ಜನರು ಸಾವನ್ನಪ್ಪಿದ್ದರೆ, ಅನೇಕರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮುಂಜಾನೆ ೨.೩೦ ರ ಸುಮಾರಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಸಂಗಮ್ ದಡಕ್ಕೆ ಬಂದಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಪವಿತ್ರ ಸ್ನಾನದ ನಂತರ ಎಲ್ಲಿಗೆ ಹೋಗಬೇಕೆಂದು ಜನಸಮೂಹಕ್ಕೆ ತಿಳಿದಿಲ್ಲದ ಕಾರಣ ಗೊಂದಲ ಉಂಟಾಯಿತು. ಎರಡನೇ ಅಮೃತ ಸ್ನಾನಕ್ಕೆ ಒಂದು ದಿನ ಮುಂಚಿತವಾಗಿ ಸುಮಾರು ಐದು ಕೋಟಿ ಜನರು ಈಗಾಗಲೇ ಪ್ರಯಾಗ್ರಾಜ್ಗೆ ಆಗಮಿಸಿದ್ದು, ಆ ದಿನವೇ ಜನಸಂದಣಿ 10 ಕೋಟಿಯನ್ನು ತಲುಪುವ ನಿರೀಕ್ಷೆಯಿದೆ.

ಮಹಾ ಕುಂಭ ಮೇಳದ ಈ ಪರಿಸ್ಥಿತಿಯ ನಂತರ, ಅಖಿಲ ಭಾರತೀಯ ಅಖಾರಾ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಅವರು ಶ್ರೀಗಳು ತಮ್ಮ ಮೌನಿ ಅಮಾವಾಸ್ಯೆ ಅಮೃತ ಸ್ನಾನವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಕುಂಭಮೇಳ ಸಂಪ್ರದಾಯದ ಪ್ರಕಾರ, ಸನ್ಯಾಸಿ, ಬೈರಾಗಿ ಮತ್ತು ಉದಸೀನ್ ಎಂಬ ಮೂರು ಪಂಥಗಳ ಅಖಾಡಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಜೊತೆಗೆ ಸಂಗಮ್ ಘಾಟ್ ಗೆ ಭವ್ಯ ಮೆರವಣಿಗೆಯಲ್ಲಿ ತೆರಳುತ್ತಾರೆ.
ಈ ವರ್ಷದ ಮೌನಿ ಅಮಾವಾಸ್ಯೆಯ ಅಮೃತ ಸ್ನಾನವು ಮಹಾ ಕುಂಭದ ಪ್ರಮುಖ ಆಕರ್ಷಣೆಯಾಗಿದ್ದು, ಕೋಟ್ಯಾಂತರ ಭಕ್ತರನ್ನು ಆಕರ್ಷಿಸುತ್ತದೆ. ಪ್ರತಿ 144 ವರ್ಷಗಳಿಗೊಮ್ಮೆ ನಡೆಯುವ ‘ತ್ರಿವೇಣಿ ಯೋಗ’ದ ಅಪರೂಪದ ಮಹೂರ್ತ ಇದಾಗಿದ್ದರಿಂದ ಇಂದು ಹೆಚ್ಚಿನ ಮಹತ್ವವನ್ನು ಪೆಡದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕುಂಭಮೇಳದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರು ಮತ್ತು ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚಿಸಿದ್ದಾರೆಂದು ತಿಳಿದುಬಂದಿದೆ.