ಮುಂಡರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಬುಧವಾರ ದಲಿತಪರ, ಕನ್ನಡ ಪರ ಸಂಘಟನೆಗಳು,ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ಔಷಧ ಅಂಗಡಿ, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದೆಲ್ಲ ವಾಹಿವಾಟು ಬೆಳಿಗ್ಗೆಯಿಂದಲೇ ಬಹುತೇಖ ಸ್ಥಗಿತಕೊಂಡಿತ್ತು. ಸ್ವಯಂಪ್ರೇರಿತವಾಗಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಬೆಂಬಲ ಸೂಚಿಸಿದರು. ಆದರೆ ವಾಹನಗಳ ಓಡಾಟ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಇದ್ದರೂ, ದಿನಂಪ್ರತಿ ಇರುವಂತೆ ಕಂಡುಬರಲಿಲ್ಲ. ಇದರಿಂದ ಸದಾ ಜನರಿಂದ ಗಿಜಗಿಡುತ್ತಿದ್ದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುಖ್ಯ ಮಾರುಕಟ್ಟೆ,ಬಜಾರ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನದಟ್ಟನೆ ಕಾಣಲಿಲ್ಲ.

ಇನ್ನು ಪ್ರತಿಭಟನಾಕಾರರು, ಅಮಿತ್ ಶಾ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕೆ ಇ ಬಿ ಗಣೇಶ ದೇವಸ್ಥಾನ ದಿಂದ ಆರಂಭಗೊಂಡ ಪ್ರತಿಭಟನೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,ಕೊಪ್ಪಳ ವೃತ್ತದಲ್ಲಿ ಜಮಾವಣೆಗೊಂಡಿತು.ಈ ವೇಳೆ, ಕೇಂದ್ರ ಸಚಿವ ಅಮಿತ್ ಶಾ ಪ್ರತಿಕೃತಿಗೆ ಚೆಪ್ಪಲಿಯಿಂದ ಹೊಡೆದು ಪ್ರತಿಭಟನಾಕಾರರು ತಮ್ಮ ಆಕ್ರೋಶ ತೀರಿಸಿಕೊಂಡರು.
ಅಲ್ಲದೇ ಅಮಿತ್ ಶಾ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರನ್ನ ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ ತಡೆಯಲು ಯತ್ನಿಸಿದರು.ಈ ವೇಳೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿ ಕೆಲಕಾಲ ಗೊಂದಲ ಏರ್ಪಟ್ಟಿತು. ಕೊನೆಗೂ ಪಟ್ಟು ಬಿಡದ ಪ್ರತಿಭಟನಾಕಾರರು ತಹಶೀಲ್ದಾರ ಕಚೇರಿ ಎದುರು ಅಮಿತ್ ಶಾ ಪ್ರತಿಕೃತಿಗೆ ಹಾಗೂ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಮೆರವಣಿಗೆಯುದ್ದಕ್ಕೂ ವಿವಿಧ ಸಂಘಟನೆಗಳ ಮುಖಂಡರು, ಕಾಂಗ್ರೆಸ್ ಧುರೀಣರು ಪಾಲ್ಗೊಂಡು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ಇರಲಿಲ್ಲ. ಬಹುತೇಖ ಸಾರಿಗೆ ಬಸ್ ಗಳು ಸಂಚಾರ ನಡೆಸಿವು.ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಡರಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಬಂದೋಬಸ್ತ್ ಕೈಗೊಂಡಿದ್ದರು.