ರಾಯಚೂರು: ಇಂದು ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ. ಇನ್ನು ರಾಯಚೂರು ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ನಡೆದಿರುವ ಅಪಗಾತದಲ್ಲಿ ಮಂತ್ರಾಲಯದ ಸಂಸ್ಕೃತ ಪಾಠಶಾಲೆ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ಕು ಜನ ಸಾವನ್ನಪ್ಪಿದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ, ಲಾರಿ ಪಲ್ಟಿಯಾಗಿ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ 10 ಜನ ವ್ಯಾಪಾರಿಗಳು ಸಾವನ್ನಪ್ಪಿದ್ದಾರೆ.

ಟೈರ್ ಸ್ಫೋಟಗೊಂಡು ಕ್ರೂಸರ್ ವಾಹನ ಪಲ್ಟಿಯಾಗಿ ಮಂತ್ರಾಲಯದ (Mantralaya) ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ, ಅಯ್ಯವಂದನ್ (18), ಸುಜೇಂದ್ರ (22) ಹಾಗೂ ಅಭಿಲಾಷ್(20)ಹಾಗೂ ಕ್ರೂಸರ್ ಚಾಲಕ ಶಿವ (24), ಮೃತ ದುರ್ದೈವಿಗಳಾಗಿದ್ದಾರೆ. ಉಳಿದ 10 ಜನರಿಗೆ ಗಂಭೀರ ಗಾಯವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂತ್ರಾಲಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪಿಗೆ ಯಾತ್ರೆ ಹೊರಟಿದ್ದರು. ಇದೇ ವೇಳೆ ದುರ್ಘಟನೆ ಸಂಭವಿಸಿದೆ.
ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಟ್ಟ ಮಂಜಿನ ನಡುವೆ ವೇಗವಾಗಿ ಚಲಿಸುತ್ತಿದ್ದ ವಾಹನದ ಆಕ್ಸಿಲ್ ಕಟ್‌ಆಗಿ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದೆ ಸಿಂಧನೂರು ಸಂಚಾರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀಗಳು ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ.