ಮುಂಡರಗಿ: ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರೋಧಿಸಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ನಾಳೆ (22-01-25) ರ ಬುಧವಾರ ಮುಂಡರಗಿ ಬಂದ್ ಗೆ ಕರೆ ನೀಡಿವೆ.

ಅಮಿತ್ ಶಾ ರನ್ನ ಮಂತ್ರಿ ಮಂಡಲದಿಂದ ವಜಾ ಮಾಡಬೇಕು.ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ಅಭಿಮಾನಿ ಬಳಗದವರು ಮುಂಡರಗಿ ಪಟ್ಟಣ ಬಂದ್ ಗೆ ಕರೆ ಕೊಟ್ಟಿವೆ.
*ಶಾಲಾ ಕಾಲೇಜು ರಜೆ ಇಲ್ಲ!*
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಫಡ್ನೇಶಿ ಅವರ ಹೇಳಿಕೆ ಪ್ರಕಾರ, ನಾಳೆ SSLC ಆಯುಕ್ತಾಲಯ ಪರೀಕ್ಷೆಗಳು ನಡೆಯುವ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಪರೀಕ್ಷೆಗಳು ನಮ್ಮ ಹಂತದಲ್ಲಿ ಇಲ್ಲದೇ ಇರುವದರಿಂದ ಮುಂದೂಡಲು ಸಹ ಬರುವದಿಲ್ಲ.ತಹಶೀಲ್ದಾರರ ಜೊತೆಗೆ ಚರ್ಚಿಸಲಾಗಿದ್ದು, ಸದ್ಯಕ್ಕೆ ನಾಳೆ ಶಾಲೆ ಕಾಲೇಜುಗಳಿಗೆ ರಜೆ ಇರುವದಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದು ಫಡ್ನೇಶಿ ತಿಳಿಸಿದ್ದಾರೆ.
*KSRTC ಬಸ್ ಸಂಚಾರ ಇದೆಯೇ?*
ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಾದ ಶೇಖರ ನಾಯ್ಕ ಅವರ ಹೇಳಿಕೆ ಪ್ರಕಾರ, ನಮ್ಮ ಚಾಲಕ ಹಾಗೂ ನಿರ್ವಾಹಕರಿಗೆ ಈವರೆಗೂ ಯಾವುದೇ ನಿರ್ದೇಶನ ನೀಡಿಲ್ಲ. ಬಸ್ ಸಂಚಾರದ ವಿಚಾರದಲ್ಲೂ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದು ಬೇರೆ ನಾಳೆ ಎಸ್ ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷೆ ದೃಷ್ಟಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶಗಳಿಗೆ ವಸತಿ ಬಸ್ ಗಳು ತೆರಳಿವೆ. ನಾಳೆಯ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವದು ಎಂದು ಬಸ್ ಡಿಪೋ ವ್ಯವಸ್ಥಾಪಕ ಶೇಖರ್ ನಾಯ್ಕ ಹೇಳಿದ್ದಾರೆ.
ಇನ್ನು ಪೊಲೀಸ್ ಇಲಾಖೆ ಮೂಲಗಳ ಪ್ರಕಾರ, ಬಂದ್ ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ, ಒತ್ತಾಯ ಪೂರ್ವಕವಾಗಿ ಯಾವುದೇ ರೀತಿ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಿಸುವಂತಿಲ್ಲ ಎಂದು ತಿಳಿಸಲಾಗಿದೆ. ಶಾಂತಿಯುತವಾಗಿ ನಮ್ಮ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಸಂಘಟನೆಗಳ ಮುಖಂಡರು ಒಪ್ಪಿಕೊಂಡಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಯಲಿದೆ.