ಗದಗ: ರಾಜ್ಯದ ಐದಾರು ಜಿಲ್ಲೆಗಳಿಗೆ ಬೇಕಾಗಿದ್ದ ಇಬ್ಬರು ಡಕಾಯಿತರನ್ನ ಬಂಧಿಸುವಲ್ಲಿ ಗದಗ ಜಿಲ್ಲೆ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆ ಕಳ್ಳತನ, ಸರಗಳ್ಳತನ,ಬೈಕ್ ಕಳ್ಳತನ ಹಾಗೂ ಹೈವೆ ರಾಬರಿ ಸೇರಿದಂತೆ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನ ಮುಂಡರಗಿ ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಆರೋಪಿಗಳ ಹುಡುಕಾಟಕ್ಕೆ ತನಿಖಾ ತಂಸ ಬಲೆ ಬೀಸಿದೆ.
ಈ ಕುರಿತು ಗದಗನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಪತ್ರಿಕಾ ಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಸವರಾಜ ಮೋಡಿಕೇರ(21) ಹಾಗೂ ಕೊಂಚಿಗೇರಿಯ ಬಾಂಡೆ ವ್ಯಾಪಾರಸ್ಥ ಚಿರಂಜೀವಿ ಮೋಡಿಕೇರ(22) ಇವರಿಬ್ಬರೂ ಬಂಧಿತ ಪ್ರಮುಖ ಆರೋಪಿಳಾಗಿದ್ದಾರೆ.
ಇವರ ಜೊತೆ ಭಾಗಿಯಾದ, ಇನ್ನೂ 5 ಆರೋಪಿಗಳ ಬಂಧನಕ್ಕೆ ತನಿಖಾ ತಂಡ ನೇಮಿಸಲಾಗಿದೆ ಎಂದು ಹೇಳಿದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಮುಂಡರಗಿ ಠಾಣೆ ವ್ಯಾಪ್ತಿಯಲ್ಲಿ ಹೈವೆ ರಾಬರಿ, ಬೈಕ್ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದವು.
ಪ್ರಕರಣ ಬೆನ್ನುಹತ್ತಿದ ಮುಂಡರಗಿ ಪೊಲೀಸರಿಗೆ ಇದರ ಹಿಂದೆ, ರಾಬರಿ ಗ್ಯಾಂಗ್ ಇರುವುದು ಪತ್ತೆಯಾಗಿದೆ. ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತವಾದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು ಗದಗ ಅಷ್ಟೇ ಅಲ್ಲದೇ, ತುಮಕೂರು, ಚಿಕ್ಕಬಳ್ಳಾಪುರ,ಶಿರಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇವರ ಮೇಲೆ ಈ ರೀತಿಯ ರಾಬರಿ ಕೇಸ್ ಗಳು ದಾಖಲಾಗಿರುವ ಮಾಹಿತಿ ಇದೆ.
ಇವರ ಮೇಲೆ ಒಟ್ಟು 18 FIR ಮೇಲೆ ದಾಖಲಾಗಿದ್ದು, ಇತರೆ ಜಿಲ್ಲಾ ಪೊಲೀಸರೊಂದಿಗೆ ಇವರ ಮಾಹಿತಿ ಹಂಚಿಕೊಳ್ಳಲಾಗುವುದು. ಇನ್ನು ಪ್ರಕರಣ ಬೇಧಿಸಿದ ಮುಂಡರಗಿ ಪೊಲೀಸ್ ತನಿಖಾ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ. ಬಿ.ಎಸ್.ನೆಮಗೌಡ, ಇಲಾಖೆಯಿಂದ ಇವರಿಗೆಲ್ಲ ಬಹುಮಾನ ನೀಡಲಾಗುವುದು ಎಂದರು.
*ಜಾಮೀನು ಪಡೆದು ಹೊರಗಿದ್ದರು ಖದೀಮರು!*
ಇನ್ನು ಬಂಧಿತ ಆರೋಪಿಗಳು ಇದಕ್ಕೂ ಮೊದಲು ಹಲವು ಪ್ರಕರಣಗಳಲ್ಲಿ ಬೇರೆ ಜಿಲ್ಲೆಗಳಲ್ಲಿ ಬಂಧಿತರಾಗಿದ್ದರು. ಆದರೆ ಜಾಮೀನು ಪಡೆದು ಹೊರಗಿದ್ದರು. ಹಾಗಾಗಿ ಆರೋಪಿಗಳ ಜಾಮೀನು ರದ್ದತಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಸಂಕದ, ಡಿಎಸ್ಪಿ, ಪ್ರಭುಗೌಡ ಕಿರೇದಳ್ಳಿ, ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್ಐ ವಿ.ಜಿ. ಪವಾರ, ಸಿಬ್ಬಂದಿಗಳಾದ, ಬಿ.ಎನ್. ಯಳವತ್ತಿ, ಎಸ್. ಎಂ. ಹಡಪದ, ಎಸ್.ಡಿ. ನತಿರ್, ಎನ್. ಐ. ಮೌಲ್ವಿ ಜೆ. ಐ. ಬಚ್ಚೇರಿ, ಲಕ್ಷ್ಮಣ ಲಮಾಣಿ, ಆನಂದ್ ಸಿಂಗ್, ಮಹೇಶ ಗೊಳಗೊಳಕಿ, ಮಲ್ಲಿಕಾರ್ಜುನ ಬನ್ನಿಕೊಪ್ಪ ಸೇರಿದಂತೆ ಇತರರು ಇದ್ದರು.
*22 ಲಕ್ಷದ ಮೊಬೈಲ್ ವಶ:*
ಇದೇ ವೇಳೆ, ಜಿಲ್ಲೆಯಲ್ಲಿ 126 ಮೊಬೈಲ್ ಕಳ್ಳತನ ಪ್ರಕರಣ ಬೇಧಿಸಿರುವ ಕುರಿತು ಮಾಹಿತಿ ನೀಡಿದ ಬಿ.ಎಸ್. ನೇಮಗೌಡ ಅವರು, ಒಟ್ಟು 22 ಲಕ್ಷ ಮೌಲ್ಯದ ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ವಿತರಿಸಲಾಗುತ್ತಿದೆ.
ರಾಜ್ಯದಲ್ಲಿ ಮೊಬೈಲ್ ಕಳ್ಳತನ ಪ್ರಕರಣ ಪತ್ತೆ ಹಚ್ಚುವಲ್ಲಿ ಗದಗ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.