ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ 2025ರಲ್ಲಿ ನಡೆಸುವ ಯುಜಿಸಿಇಟಿ, ಪಿಜಿಸಿಇಟಿ, ಡಿಸಿಇಟಿ ಸೇರಿ ಐದು ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2024-25ನೇ ಸಾಲಿನ ಇಂಜಿನಿಯರಿಂಗ್, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಏ.16, 17ರಂದು ಸಿಇಟಿ ನಡೆಯಲಿದೆ. ಸಿಇಟಿಗೆ ಜ.23ರಿಂದ ಫೆ.21ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗುರುವಾರ ಪ್ರಕಟಿಸಿದರು.

ಏ.16ರಂದು ಬೆಳಗ್ಗೆ 10.30ರಿಂದ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ ರಾಸಾಯನಶಾಸ್ತ್ರ ಹಾಗೂ ಏ.17ರಂದು ಬೆಳಗ್ಗೆ ಗಣಿತ, ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ಗೂ ಅರ್ಜಿ
ಸಿಇಟಿ-2025ರ ಅರ್ಜಿಯು ಎಲ್ಲ ಕೋರ್ಸ್ಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅದೇರೀತಿ ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) ನೆಡೆಸುವ ತಾಂತ್ರಿಕ ಕೋರ್ಸ್ಗಳ ಪ್ರವೇಶ ಪರೀಕ್ಷಯ ದಿನಾಂಕ ಪ್ರಕಟವಾಗಿದ್ದು, ಫೆಬ್ರವರಿ 3, 2025 ಮಧ್ಯಾನ್ಹ 2 ಗಂಟೆಯಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮೇ 10, 2025 ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.