ಗದಗ: ಯುವಕರಿಗೆ ಅಕ್ರಮವಾಗಿ ಬಂದೂಕು ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಶ್ರೀರಾಮ ಸೇನೆಯಿಂದ ಮುಂದಾಗಿದ್ದು, ಅದರ ಮುಖ್ಯಸ್ಥರಾಗಿರುವ ಪ್ರಮೋದ ಮುತಾಲಿಕ್ ಅವರ ವಿರುದ್ಧ ಸರ್ಕಾರ ದೇಶದ್ರೋಹ ದಾಖಲಿಸಬೇಕು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಕಾರಣವಾಗುತ್ತಿರುವ ಶ್ರೀರಾಮಸೇನೆ ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸುವ ಕೆಲಸವಾಗಬೇಕು. ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಶ್ರೀರಾಮಸೇನೆಯಿಂದ 186 ಜನ ಯುವಕರಿಗೆ ತರಬೇತಿ ನೀಡಿದ್ದಾಗಿ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದಾರೆ.
ಅಲ್ಲದೇ, ಅಕ್ರಮವಾಗಿ ಬಂದೂಕು ತರಬೇತಿ ನೀಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ 27 ಜನರಲ್ಲಿ ಗದುಗಿನ 7 ಜನರಿದ್ದಾರೆ. ಇದರಿಂದ ಈ ಭಾಗದಲ್ಲಿ ವ್ಯವಸ್ಥಿತವಾಗಿ ಸಹಜವಾಗಿ ಭಯ ಹುಟ್ಟಿಸುವುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಶೋಧಕ ಎಂ.ಎ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯಲ್ಲಿ ಕೊಲೆಗಾರರ ಮೇಲೆ ಪ್ರಕರಣ ದಾಖಲಿಸಿದ್ದು ಬಿಟ್ಟರೆ ಅವರ ಹಿಂದಿನ ಸಂಘಟನೆಗಳ ಬಗ್ಗೆ ಪತ್ತೆ ಹಚ್ಚಲಿಲ್ಲ. ಇನ್ನೂ ಎಷ್ಟು ಜನ ವಿಚಾರವಾದಿಗಳ ಹತ್ಯೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಮುಖಂಡ ಶರೀಫ ಬಿಳೆಯಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಗೊಂದಲಗಳಿಂದ ಜನ ಬೇಸತ್ತು ಕಾಂಗ್ರೆಸ್ಗೆ ಬೆಂಬಲಿಸಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರವೂ ಇಂತಹ ಗೊಂದಲಗಳಿಂದ ಹೊರತಾಗಿಲ್ಲ.
ಪ್ರಸ್ತುತ ಶ್ರೀರಾಮ ಸೇನೆಯಿಂದ ಬಂದೂಕು ತರಬೇತಿ ಪಡೆದವರ ಪೈಕಿ ಹಲವರು ರೌಡಿಶೀಟರ್, ಅನೇಕ ಪ್ರಕರಣಗಳಲ್ಲಿ ಭಾಗಿಯಾದವರು. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ನಿಗಾ ಇಡಬೇಕು ಎಂದು ಹೇಳಿದರು.
ಯುವಕರಿಗೆ ಅಕ್ರಮವಾಗಿ ಬಂದೂಕು ತರಬೇತಿ ನೀಡಲು ಬಳಸಿದ್ದ ಬಂದೂಕುಗಳನ್ನು ಎಲ್ಲಿ ಸಂಗ್ರಹಿಸಲಾಗಿತ್ತು, ಅವುಗಳನ್ನು ಎಲ್ಲಿಂದ ತರಲಾಗಿತ್ತು. ಯಾರು ಪೂರೈಕೆ ಮಾಡಿದ್ದಾರೆ ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಅಲ್ಲದೇ, ಯಾರ್ಯಾರಿಗೆ ತರಬೇತಿ ನೀಡಿದ್ದಾರೆ, ಅವರ ಬಳಿ ಶಸ್ತ್ರಾಸ್ತ್ರಗಳು ಇರುವ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ‘ವಿಶೇಷ ಟಾಸ್ಕ್ ಫೋರ್ಸ್’ ರಚಿಸುವಂತೆ ಸಾಹಿತಿ ಬಸವರಾಜ ಸೂಳಿಭಾವಿ ಒತ್ತಾಯಿಸಿದ್ದಾರೆ.
6-8 ಜನ ನಕ್ಸಲರ ತಂಡಕ್ಕೆ ನೂರಾರು ಪೊಲೀಸರ ನೇಮಿಸುವ ಸರ್ಕಾರ, ಇಲ್ಲಿ 186 ಜನರಿಗೆ ಅಕ್ರಮವಾಗಿ ಬಂದೂಕು ತರಬೇತಿ ನೀಡಿದ್ದರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಅವರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ.ಸುನೀಲಕುಮಾರ ಅವರು ಶರಣಾಗತಿಯಾದ ನಕ್ಸಲರ ಬಗ್ಗೆ ಮಾತನಾಡುತ್ತಾರೆ. ಆದರೆ, ಇಂತಹ ಅಕ್ರಮ ಬಂದೂಕು ತರಬೇತಿ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಅವರ ಮೌನ ಈ ಅಕ್ರಮ ಬಂದೂಕು ತರಬೇತಿಗೆ ಬೆಂಬಲ ಅಥವಾ ಅವರ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂಬ ಅನುಮಾನ ಮೂಡಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಶೇಖಣ್ಣ ಕವಳಿಕಾಯಿ, ದಲಿತ ಮುಖಂಡರಾದ ಮುತ್ತು ಬಿಳೆಯಲಿ, ಆನಂದ ಸಿಂಗಾಡಿ, ಬಾಲರಾಜ ಅರಬರ, ಶಿವಾನಂದ ತಮ್ಮಣ್ಣವರ, ನಾಗರಾಜ ಗೋಕಾವಿ, ಅನೀಲ ಕಾಳೆ, ಪರಶು ಕಾಳೆ ಸೇರಿ ಹಲವರು ಉಪಸ್ಥಿತರಿದ್ದರು.