ಗದಗ:ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಸಾಧನೆಯನ್ನ ಅಭ್ಯಾಸ ಮಾಡಬೇಕು. ಆ ಮೂಲಕ ಅವರ ತತ್ವಾದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಆಚರಿಸುವ “ರಾಷ್ಟ್ರೀಯ ಯುವ ದಿನ” ದ ಆಚರಣೆ ಸಾರ್ಥಕವೆನಿಸುತ್ತದೆ ಎಂದು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ವೈ.ಚಿಕ್ಕಟ್ಟಿ ಕರೆ ನೀಡಿದರು.
ನಗರದ ಮುಂಡರಗಿ ರಸ್ತೆಗೆ ಹೊಂದಿಕೊಂಡಿರುವ ಚಿಕ್ಕಟ್ಟಿ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಯುವಕರಿಗೆ ಸಂಸ್ಕಾರದ ಅವಶ್ಯಕತೆಯಿದ್ದು, ಸ್ವಾಮಿ ವಿವೇಕಾನಂದರಂಥ ಮಹಾನ್ ವ್ಯಕ್ತಿಗಳ ಸಂದೇಶಗಳನ್ನ ಅರಿತುಕೊಳ್ಳಬೇಕು. ಸಂಸ್ಕಾರ ಹಾಗೂ ಸತತ ಪ್ರಯತ್ನದಿಂದ ಯುವಕರು ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ಅನೀಲ್ ನಾಯಕ್ ಮಾತನಾಡಿ, ಸ್ವಾಮಿ ವಿವೇಕಾನಂದರು, ಸೇವೆ ಮತ್ತು ತ್ಯಾಗದ ಬಗ್ಗೆ ಹೆಚ್ಚು ಒತ್ತನ್ನು ನೀಡಿದವರು. ಇಡೀ ಬ್ರಹ್ಮಾಂಡಕ್ಕೆ ಮಾದರಿಯಾದವರು. ಕಾವಿಯ ಗೂಢಾರ್ಥವನ್ನು ಸಮರ್ಪಕವಾಗಿ ಸಾರಿದ ವೀರ ಸನ್ಯಾಸಿ ಎಂದರೆ ಸ್ವಾಮಿ ವಿವೇಕಾನಂದರು.
ಆ ಪ್ರಕಾರ ದೈವಿಕ ಜ್ಞಾನದ ಜ್ವಾಲೆಯಲ್ಲಿ ನಮ್ಮ ಪ್ರಾಪಂಚಿಕ ಆಸೆ, ಆಕಾಂಕ್ಷೆಗಳು ಮತ್ತು ಕಾಮನೆಗಳನ್ನು ಸುಡುವುದೇ ಆ ಕಾವಿಯ ನಿಜಾರ್ಥ ಎಂದು ಸಾರಿದವರು.ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅಥವಾ ನಿಘಂಟಿನಲ್ಲಿ ಸ್ವಾಮಿ ವಿವೇಕಾನಂದರನ್ನು ವರ್ಣಿಸುವ ಪದಗಳು ಅಥವಾ ವ್ಯಾಖ್ಯಾನಗಳು ಲಭಿಸಲು ಕಷ್ಟಕರ ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ಮಾತನಾಡಿ, ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ, ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ ಎಂದರೆ ಸ್ವಾಮಿ ವಿವೇಕಾನಂದರು.ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಆಚರಿಸುತ್ತಿರುವದೇ ನಮಗೆಲ್ಲ ಹೆಮ್ಮೆ ತರುವಂಥ ವಿಷಯ ಎಂದು ಹೇಳಿದರು.
ಇನ್ನೋರ್ವ ಶಿಕ್ಷಕಿ ರಜನಿ ಅವರು ಕೂಡ ರಾಷ್ಟ್ರೀಯ ಯುವ ದಿನಚಾರಣೆ ಕುರಿತು ಮಾತನಾಡಿದರು.
ಇದೇ ವೇಳೆ, ವಿಜಯಪುರ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಕಾಶಿಬಾಯಿ ಚಿಕ್ಕಟ್ಟಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯಾ ಸದಾಶಿವ ಚಿಕ್ಕಟ್ಟಿ ಅವರು, ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಿಂದ ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದವರೆಗೂ ಕುರಿತಾದ ವಿಷಯ ಮಂಡನೆ ವಿಡಿಯೋವನ್ನ ಇದೇ ವೇಳೆ ಪ್ರಸಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.