ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ನ 50 ಕೋಟಿ ಅನುದಾನದ ಅಡಿಯಲ್ಲಿ ಹಳೇ ಬಸ್ ನಿಲ್ದಾಣವನ್ನು ಅಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಇಂದು ಲೋಕಾರ್ಪಣೆಗೊಳಿಸಲಾಯಿತು.

ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹಳೇ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡುತ್ತಾ ಈ ಬಸ್ ನಿಲ್ದಾಣ ಕಾರ್ಯರಂಭದ ನಂತರ ನಗರ ಸಾರಿಗೆ ಸಂಚಾರ ಅತ್ಯಂತ ಸುಗಮವಾಗುವದಲ್ಲದೇ ನಗರದ ಮಧ್ಯದಲ್ಲಿ ನೆಲೆಸಿರುವ ಈ ನಿಲ್ದಾಣದಿಂದ ಜನರಿಗೆ ಸಂಚರಿಸಲು ಅನಕೂಲವಾಗುವದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್, ಹೆಸ್ಕಾಂನ ಅಧ್ಯಕ್ಷರಾದ ಶ್ರೀ ಸೈಯದ್ ಅಜೀಮ ಪೀರ್ ಎಸ್ ಖಾದ್ರಿ, ಮಾಜಿ ಸಂಸದ ಶ್ರೀ ಐಜಿ ಸನದಿ, ಮಹಾಪೌರರಾದ ಶ್ರೀ ರಾಮಪ್ಪ ಕೃಷ್ಣಪ್ಪ ಬಡಿಗೇರ್, ಹೂಡಾದ ಅಧ್ಯಕ್ಷರಾದ ಶ್ರೀ ಶಾಕಿರ್ ಸನದಿ ಹಾಗೂ ಪಾಲಿಕೆಯ ಸದಸ್ಯರುಗಳು ಸೇರಿದಂತೆ ಎಲ್ಲ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*ಏನೆಲ್ಲಾ ಇದೆ ಬಸ್ ನಿಲ್ದಾಣದಲ್ಲಿ*
ಹಳೇ ಬಸ್ ನಿಲ್ದಾಣವನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ. ನೆಲಮಾಳಿಗೆಯಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಅಗ್ನಿ ಅವಘಡ ಸಂಭವಿಸಿದರೆ ಫೈರ್ ಟ್ಯಾಂಕ್ ಹಾಗೂ ನೀರಿನ ಟ್ಯಾಂಕ್ ನಿಲ್ಲಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಕೆಳ ಮಹಡಿಯಿಂದ ನಗರ ಸಾರಿಗೆ ಹಾಗೂ ಬಿಆರ್ಟಿಎಸ್ ಬಸ್ಗಳು ಕಾರ್ಯ ನಿರ್ವಹಿಸಿದರೆ, 1ನೇ ಮಹಡಿಯಿಂದ ಉಪನಗರ ಸಾರಿಗೆ ಬಸ್ಗಳು ಸಂಚರಿಸಲಿವೆ. ನಗರ ಸಾರಿಗೆ ಬಸ್ಗಳಿಗೆ 8 ಫ್ಲಾಟ್ಫಾರ್ಮ್, ಬಿಆರ್ಟಿಎಸ್ ಬಸ್ಗಳಿಗೆ ಆರು ಫ್ಲಾಟ್ಫಾರ್ಮ್ ಮೀಸಲಿಡಲಾಗಿದೆ. ಅಲ್ಲದೆ, 16 ಐಡಿಯಲ್ ಬಸ್ ಪಾರ್ಕಿಂಗ್ಗೂ ವ್ಯವಸ್ಥೆ ಕಲ್ಪಿಸಲಾಗಿದೆ. 1ನೇ ಮಹಡಿಯಲ್ಲಿ ಉಪನಗರ ಸಾರಿಗೆ ಬಸ್ಗಳಿಗಾಗಿ 14 ಫ್ಲಾಟ್ಫಾರ್ಮ್ ನಿರ್ಮಿಸಲಾಗಿದೆ.
ಇದೇ ಮೊದಲ ಬಾರಿಗೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸಾ ಘಟಕ ತೆರೆಯಲಾಗುತ್ತದೆ. ಅದಕ್ಕಾಗಿ ಓರ್ವ ವೈದ್ಯ ಸಿಬ್ಬಂದಿ ಹೊಂದಿರುವ ಚಿಕ್ಕ ಆಸ್ಪತ್ರೆಗೆ ಅವಕಾಶ ಕಲ್ಪಿಸಲಾಗಿದೆ. ವೃದ್ಧರು, ಮಕ್ಕಳ ಅನುಕೂಲಕ್ಕಾಗಿ ಲಿಫ್ಟ್ ಹಾಗೂ ಎಕ್ಸಿಲೇಟರ್ ವ್ಯವಸ್ಥೆ ಮಾಡಲಾಗಿದೆ.