ಮುಂಡರಗಿ: ಅಂಬೇಡ್ಕರ್ ವಸತಿ ಶಾಲೆಗೆಂದು ಸರ್ಕಾರ ಖರೀದಿ ಮಾಡಿರುವ ಭೂಮಿಯನ್ನ ದುರ್ಬಳಕೆ ಮಾಡಿಕೊಂಡಿದ್ದು, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಚಳುವಳಿ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬಾಡಿಗೆ ಕಟ್ಟಡದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ತಾಲೂಕಿನ ಬೂದಿಹಾಳ ಗ್ರಾಮದ ಸಮೀಪ ಸರ್ಕಾರದಿಂದ ಜಮೀನು ಖರೀದಿಸಲಾಗಿದೆ. ಆದರೆ, ಪ್ರಾಂಶುಪಾಲರು ಈ ಜಮೀನನ್ನು ಕೃಷಿ ಕಾರ್ಯಕ್ಕೆ ಬಳಸಲು ರೈತರೊಬ್ಬರಿಗೆ ಲಾವಣಿ ನೀಡಿ ಸರ್ಕಾರದ ಜಮೀನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ಅಧ್ಯಕ್ಷ ಲಕ್ಷ್ಮಣ ತಗಡಿನಮನಿ ಒತ್ತಾಯಿಸಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ವಸತಿ ಶಾಲೆಗಾಗಿ 13 ಎಕರೆ 3 ಗುಂಟೆ ಜಮೀನು ಖರೀದಿಸಲಾಗಿದೆ. ಆ ಜಾಗದಲ್ಲಿ ವಸತಿ ಶಾಲೆಯವರು ಬೋರ್ಡ್ ಹಾಕಿ ಹದ್ದುಬಸ್ತು ಮಾಡಿಕೊಳ್ಳಬೇಕು. ಅದು ಬಿಟ್ಟು ಮಕ್ಕಳ ಶಿಕ್ಷಣಕ್ಕಾಗಿ ನೀಡಿರುವ ಜಾಗೆಯನ್ನ ಉಳುಮೆ ಮಾಡಲು ನೀಡಿರುವುದು ಸರಿಯಲ್ಲ. ಈ ಬಗ್ಗೆ ರೈತರನ್ನು ಕೇಳಿದರೆ ಪ್ರಾಂಶುಪಾಲರ ಹೆಸರು ಹೇಳುತ್ತಾರೆ, ಪ್ರಾಂಶುಪಾಲರನ್ನು ವಿಚಾರಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಜಾಗ ದುರ್ಬಳಕೆಯಾಗುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ. ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅವರನ್ನ ಕೆಲಸದಿಂದ ವಜಾ ಮಾಡಬೇಕು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದುರ್ಬಳಕೆ ಪ್ರಕರಣ ದಾಖಲಿಸಿ ಸರ್ಕಾರದ ಭೂಮಿ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳಿಗೆ ಪಾಠ ಕಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದಲಿತ ಸಂಘಟನೆಗಳಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯ ಮೂಲಕ ಲಕ್ಷ್ಮಣ ತಗಡಿನಮನಿ ಎಚ್ಚರಿಸಿದರು. ಅಲ್ಲದೇ ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್ ತಳಗೇರಿ, ನಿಂಗಪ್ಪ ಪೂಜಾರ ಇದ್ದರು.