ಗದಗ: ಯುವಕರ ಮಧ್ಯೆ ಹಣದ ವಿಚಾರವಾಗಿ ಗಲಾಟೆ ನಡೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಗದಗ ನಗರದ ಭೀಷ್ಮ ಕೆರೆ ಬಳಿ ನಡೆದಿದೆ.
ಗೂಡಸಾಬ್ ಅನ್ನೋ ಲಾರಿ ಚಾಲಕ, ತನ್ನ ಲಾರಿಯಲ್ಲಿದ್ದ ಸಕ್ಕರೆ ಅನ್ಲೋಡ್ ಮಾಡಿ, ಅಂಗಡಿ ಮಾಲೀಕನಿಂದ ಅದರ ಬಾಡಿಗೆ ಹಣ 3200 ರೂ. ಪಡೆದಿದ್ದಾನೆ.
ಈ ವೇಳೆ ಮಂಜುನಾಥ ಹಿರೇಮಠ ಹಾಗೂ ಶಹನವಾಜ್ ಸಿದ್ನೆಕೊಪ್ಪ ಅನ್ನೋ ಯುವಕರು, ಹೊಸ ಬಸ್ ನಿಲ್ದಾಣದ ಬಳಿ ಈತನನ್ನ ತಡೆದು, ಹಣ ದೋಚಲು ಯತ್ನಿಸಿದ್ದಾರಂತೆ. ತಕ್ಷಣ ಅವರಿಂದ ತಪ್ಪಿಸಿಕೊಂಡು, ಗೂಡಸಾಬ್ ನಗರದ ಎಂಜಿಎಂ ಆಸ್ಪತ್ರೆತನಕ ಓಡಿ ಬಂದಿದ್ದಾನೆ.

ಯುವಕರ ಗಲಾಟೆ ಗಮನಿಸಿದ ಸ್ಥಳಿಯರು ಬುದ್ಧಿವಾದ ಹೇಳಿದರೂ ಯಾರ ಮಾತನ್ನೂ ಕೇಳಿಲ್ಲ. ಒಬ್ಬರಿಗೊಬ್ಬರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ, ತನ್ನನ್ನ ರಕ್ಷಿಸಿಕೊಳ್ಳೋಕೆ, ಗೂಡಸಾಬ್, ಬ್ಲೇಡ್ ನಿಂದ ಇಬ್ಬರೂ ಯುವಕರ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಹಲ್ಲೆ ಮಾಡಿದ ಆರೋಪಿ, ಗೂಡಸಾಬ್ ಸ್ವತಃ ತಾನೇ ಪೊಲೀಸರ ಬಳಿ ಬಂದು ಶರಣಾಗಿದ್ದಾನೆ.
ಘಟನೆಯಲ್ಲಿ ಇಬ್ಬರೂ ಯುವಕರ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಹಲ್ಲೆಗೊಳಗಾದ ಯುವಕರು ಹೇಳೋದೆನು!?*
ಇಬ್ಬರು ಯುವಕರಿಗೆ ಹಲ್ಲೆ ನಡೆಸಿದ ಆರೋಪಿ ಗೂಡಸಾಬ್ ಹೇಳೋದು ಒಂದು ಕಥೆಯಾದ್ರೆ, ಇತ್ತ ಗಾಯಾಳು ಇಬ್ಬರು ಯುವಕರಾದ, ಮಂಜುನಾಥ್ ಹಿರೇಮಠ ಹಾಗೂ ಶಹನವಾಜ್ ಸಿದ್ನೆಕೊಪ್ಪ ಹೇಳೋದೆ ಬೇರೆ.
ನಮ್ಮ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿದ್ದಾರೆ. ಎಂಟು ಜನರು ಕೂಡಿಕೊಂಡು ಅಟ್ಟಾಡಿಸಿ ನಮ್ಮ ಹಲ್ಲೆ ಮಾಡಿದ್ರು, ಹಳೆ ದ್ವೇಷದ ಹಿನ್ನೆಲೆಯಿಂದ ಈ ಹಲ್ಲೆ ಮಾಡಲಾಗಿದೆ ಎಂದು ಮಂಜುನಾಥ ಆರೋಪಿಸುತ್ತಿದ್ದು, ಓಂ ಅನ್ನುವಾತ ಅಂಗಡಿಯಲ್ಲಿ ಗುಟಕಾ ಪಾಕೇಟ್ ಗಳನ್ನ ಕದಿಯುತ್ತಿದ್ದ.ಈತನನ್ನ ನಾವು ಪೊಲೀಸರಿಗೆ ಹಿಡಿದು ಕೊಟ್ಟಿದ್ದೆವು. ಹೀಗಾಗಿ ಈತನ ಸಹಚರರು ಕೂಡಿಕೊಂಡು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋದು ಗಾಯಾಳು ಮಂಜುನಾಥ ಆರೋಪಿಸಿದ್ದಾನೆ.
ಇನ್ನು ಘಟನೆ ವಿಚಾರವಾಗಿ ಗಾಯಾಳು ಪೋಷಕರು, ಅವಳಿ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಪುಂಡ ಪೋಕರಿಗಳಿಗೆ ಮಾರಕಾಸ್ತ್ರಗಳು ಸಲೀಸಾಗಿ ಸಿಗುವಂತಾಗಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಸದ್ಯ ಶಹರ ಪೊಲೀಸರು, ಹಲ್ಲೆ ಮಾಡಿದ ಗೂಡಸಾಬ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ, ಯಾವುದು ಸತ್ಯ, ಯಾವದು ಸುಳ್ಳು ಅನ್ನೋದು ತಿಳಿಯಲಿದೆ.