ತಿರುಪತಿಯಲ್ಲಿ ವೈಕುಂಠಂ ದ್ವಾರ ದರ್ಶನ ಟೋಕನ್ ಕೇಂದ್ರಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಜನ ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಿರುಪತಿಯ ರುಯಾ ಮತ್ತು ಸ್ವಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಬಗ್ಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಡಿಜಿಪಿ, ಟಿಟಿಡಿ ಇಒ, ತಿರುಪತಿ ಕಲೆಕ್ಟರ್ ಮತ್ತು ಎಸ್ಪಿ ಅವರೊಂದಿಗೆ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆಂದು ತಿಳಿದಿದ್ದರೂ ಸಹ ಸಾಕಷ್ಟು ವ್ಯವಸ್ಥೆಗಳನ್ನು ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೈಕುಂಠ ಏಕಾದಶಿಯ ಸಂದರ್ಭದಲ್ಲಿ ತಿರುಮಲ ಶ್ರೀವರಿ ವೈಕುಂಠ ದ್ವಾರದ ದರ್ಶನಕ್ಕಾಗಿ ತಿರುಪತಿಯ ಎಂಟು ಕೇಂದ್ರಗಳಲ್ಲಿ ಸ್ಲಾಟ್ ಮಾಡಿದ ಸರ್ವ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಈ ತಿಂಗಳ 10, 11 ಮತ್ತು 12 ರಂದು ಒಟ್ಟು 1.20 ಲಕ್ಷ ಟೋಕನ್‌ಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದಾಗ್ಯೂ ದಿನಾಂಕ 9 ರ ಗುರುವಾರದಂದು ಬೆಳಗ್ಗೆ 5 ಗಂಟೆಗೆ ಟೋಕನ್ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂಬ ವಿಚಾರ ಗೊತ್ತಾದ ಕೂಡಲೇ ಬುಧವಾರ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಟೋಕನ್ ವಿತರಣಾ ಕೇಂದ್ರಗಳನ್ನು ತಲುಪಿದರು.
ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿ
ತಿರುಮಲದಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತಿರುಮಲದ ಪರಿಸ್ಥಿತಿಯ ಬಗ್ಗೆ ಅವರು ನಿರಂತರವಾಗಿ ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಸಿಎಂ ಚಂದ್ರಬಾಬುನಾಯ್ಡು ಆದೇಶದ ಮೇರೆಗೆ ಸಚಿವರಾದ ಅನಿತಾ, ಅಂಗಾನಿ ಸತ್ಯ ಪ್ರಸಾದ್ ಮತ್ತು ಸತ್ಯಕುಮಾರ್ ಯಾದವ್ ತಿರುಪತಿಯನ್ನು ತಲುಪಿದ್ದಾರೆ. ಸಚಿವರು ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಗಾಯಾಳುಗಳಿಗೆ ವೈದ್ಯಕೀಯ ಸೇವೆಗಳನ್ನು ಸರಿಯಾಗಿ ಒದಗಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಚಂದ್ರಬಾಬು ನಾಯ್ಡು ಇಂದು ತಿರುಪತಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿರುವ ಚಂದ್ರಬಾಬು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಲಿದ್ದಾರೆ. ನಂತರ, ಅವರು ಅಧಿಕಾರಿಗಳೊಂದಿಗೆ ಘಟನೆಯನ್ನು ಪರಿಶೀಲಿಸಲಿದ್ದಾರೆ ಮತ್ತು ಸೂಕ್ತ ಸೂಚನೆಗಳನ್ನು ನೀಡಲಿದ್ದಾರೆ.
ಇದನ್ನೂ ಓದಿ: 26ನೇ ವಿವಾಹ ವಾರ್ಷಿಕೋತ್ಸವದ ಕೇಕ್ ಕತ್ತರಿಸಿ ಮದ್ವೆ ಬಟ್ಟೆಯಲ್ಲೇ ದಂಪತಿ ಸಾವಿಗೆ ಶರಣು! ಡೆತ್ನೋಟ್ನಲ್ಲಿತ್ತು ಮನಕಲಕುವ ಸಂಗತಿ | Wedding anniversary
ಪ್ರಧಾನಿ ಮೋದಿ ಸಂತಾಪ
ತಿರುಪತಿ ಘಟನೆಯ ಬಗ್ಗೆ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ತಿರುಪತಿಯಲ್ಲಿ ಈ ಘಟನೆ ನಡೆದಿರುವುದು ದುಃಖಕರ ಎಂದು ಹೇಳಿರುವ ಅವರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ ಎಂದು ಮೋದಿ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಸಹ ಆಘಾತ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲವನ್ನು ನೀಡುವಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ.