ಬೆಳಗಾವಿ: ಡ್ಯೂಟಿ ಚೇಂಜ್ ಮಾಡಿದ್ದಕ್ಕೆ ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಡ್ರಾಮಾ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ (ಜ.1) ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ಮುದಕಪ್ಪ ಉದಗಟ್ಟಿ ಅನ್ನುವಾತ ವಿಷ ತೆಗೆದುಕೊಂಡಂತೆ ಬಿದ್ದು ಹೊರಳಾಡಿ ನಾಟಕವಾಡಿದ್ದಾನೆ.
ಪೊಲೀಸ್ ಪೇದೆ ನಾಟಕವಾಡಿದ್ರೆ, ಇತ್ತ ಡ್ಯೂಟಿ ಬದಲಿಸಿದ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ಅವರಿಗೆ, ಪೇದೆಯ ಈ ಆತ್ಮಹತ್ಯೆ ಡ್ರಾಮಾ ನೋಡಿ ಲೋ ಬಿಪಿ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಐ ಡಿ.ಕೆ.ಪಾಟೀಲರ ಚೆಂಬರ್‌ನಲ್ಲಿ ಪೇದೆ ಮುದಕಪ್ಪ ಆತ್ಮಹತ್ಯೆ ಡ್ರಾಮಾ ಮಾಡಿದ್ದನು.
ಎರಡು ದಿನ ರಜೆಗೆ ಹೋಗಿ ಮರಳಿ ಬಂದಿದ್ದ ಪೇದೆ ಮುದಕಪ್ಪನಿಗೆ ಪಿಐ ಡಿ.ಕೆ.ಪಾಟೀಲ ಅವರು, ಡ್ಯೂಟಿ ಬದಲಿಸಿ ಅಲ್ಲಿಗೆ ತೆರಳುವಂತೆ ಸೂಚಿಸಿದ್ದಾರೆ.
ಇದಕ್ಕೆ ಒಪ್ಪದ ಪೇದೆ, ತಾನು ವಿಷ ಸೇವಿಸುತ್ತೇನೆಂದು ಕಚೇರಿಯಲ್ಲಿ ಬಿದ್ದು ಉರುಳಾಡಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಶಿಪ್ಟ್ ಮಾಡಿ ಆರೋಗ್ಯ ತಪಾಸಣೆ ಮಾಡಿದಾಗ, ವೈದ್ಯರು ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದಾರೆ. ಬಳಿಕ ಮೇಲಾಧಿಕಾರಿಗಳು ಪೇದೆಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ.
ಆದರೆ ಡ್ರಾಮಾದಿಂದ ಕಂಗಾಲಾದ ಪಿಐ ಡಿ.ಕೆ.ಪಾಟೀಲರಿಗೆ ಲೋ ಬಿಪಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಹೈಡ್ರಾಮಾದ ವರದಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್‌ಗೆ ತಲುಪಿದೆ.