ಗದಗ: ಎಟಿಎಂ ನಲ್ಲಿ ಇನ್ಮುಂದೆ ನೀವು ಹಣ ಬಿಡಿಸಿಕೊಳ್ಳೋ ಮುನ್ನ ಹುಷಾರಾಗಿರಿ.ಯಾಕಂದ್ರೆ, ನಿಮಗೆ ಹಣ ಬಿಡಿಸಿಕೊಡ್ತಿನಿ ಅಂತ ಸಹಾಯ ಮಾಡೋ ನೆಪದಲ್ಲಿ ನಿಮ್ಮ ಹಣಕ್ಕೆ ಕನ್ನ ಹಾಕೋರಿದ್ದಾರೆ. ಹುಷಾರು..!
ಹೌದು… ಮುದ್ರಣ ಕಾಶಿ ಗದಗನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಂತರ್ ಜಿಲ್ಲಾ ಕಿಲಾಡಿ ಕಳ್ಳನೊಬ್ಬನನ್ನ ಬೆಟಗೇರಿ ಬಡಾವಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕವೇನೂರು ಗ್ರಾಮದ ನಿವಾಸಿ ಸತೀಶ್ ಬಿರಾದಾರ ಅನ್ನೋ ಖದೀಮನಿಗೆ ಖಾಕಿ ಹೆಡೆಮುರಿ ಕಟ್ಟಿದೆ.ನಗರದ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಇರೋ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ, ಹುಯಿಲಗೋಳ ಗ್ರಾಮದ ಹುಲಿಗೆವ್ವ ಕುರಿ ಅನ್ನೋ ಮಹಿಳೆ ಹೊಸದಾಗಿ ಎಟಿಎಂ ಕಾರ್ಡ್ ತೆಗೆದುಕೊಂಡು, ಅದರ ಎಟಿಎಂ ಪಿನ್ ಸೆಟ್ ಮಾಡಲು ಪರದಾಟ ನಡೆಸಿದ್ದಾರೆ. ಇದನ್ನ ಗಮನಿಸಿದ ಐನಾತಿ ಸತೀಶ್ ಎಟಿಎಂ ಪಿನ್ ಸೆಟ್ ಮಾಡಿಕೊಡುವಂತೆ ನಾಟಕವಾಡಿ, ನಿಮ್ಮ ಎಟಿಎಂಗೆ ಪಿನ್ ಸೆಟ್ ಆಗಿದೆ ಎಂದು ಹೇಳಿ, ಅವರಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ಕಳಿಸಿದ್ದಾನೆ.
ನಂತರ ಹಂತ ಹಂತವಾಗಿ 62 ಸಾವಿರ ಹಣವನ್ನ ಎಗರಿಸಿದ್ದಾನೆ. ಹಣ ಕಳೆದುಕೊಂಡ ಹುಲಿಗೆವ್ವ ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ರು. ಸಿಸಿಟಿವಿ ದೃಶ್ಯದ ಜಾಡು ಹಿಡಿದ ಪೊಲೀಸರು ಸದ್ಯ ಕಿಲಾಡಿ ಆರೋಪಿಗೆ ಕೋಳ ತೊಡಿಸಿದ್ದಾರೆ.
ಇನ್ನು ಖದೀಮ ಸತೀಶ್ ಬಿರಾದಾರ ಓದಿದ್ದು ಮಾತ್ರ 3 ನೇ ತರಗತಿ. ಆದ್ರೆ ವಂಚನೆ ಮಾಡೋದ್ರಲ್ಲಿ ಯಾವ ವಿದ್ಯೆಗಿಂದ ಕಮ್ಮಿ ಇಲ್ಲದವನಾಗಿದ್ದು, ದುಶ್ಚಟಗಳಿಗೆ ಬಲಿಯಾಗಿದ್ದ. ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಾ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಟಿಎಂ ಬಳಿ ನಿಂತು ವಂಚನೆ ಮಾಡ್ತಾಯಿದ್ದ. ಬೇರೆ ಬೇರೆ ಎಟಿಎಂ ಬಳಿ ನಿಂತು ಅಮಾಯಕರು ಬಂದಾಗ, ಎಟಿಎಂನಿಂದ ಹಣ ಡ್ರಾ ಮಾಡುವ ನಾಟಕವನ್ನು ಮಾಡಿ, ಕ್ಷಣಾರ್ಧದಲ್ಲಿ ಎಟಿಎಂ ಬದಲಾವಣೆ ಮಾಡಿ, ಎಸ್ಕೇಪ್ ಆಗ್ತಿದ್ದ.
ಸದ್ಯ ಗದಗ ನಗರದಲ್ಲಿ ತನ್ನ ಕೈಚಳಕ ತೋರಿಸಿದ್ದ ಸತೀಶ್ ನ, ಎಲ್ಲಾ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.ಒಟ್ನಲ್ಲಿ ನಿಮ್ಮ ಎಟಿಎಂ ಹಾಗೂ ಹಣದ ವ್ಯವಹಾರ ಇದ್ದಲ್ಲಿ, ಅಪರಿಚಿತರಿಂದ ಸಹಾಯ ಪಡೆಯೋ ಬದಲು, ಸಂಬಂಧಿಸಿದ ಸಿಬ್ಬಂದಿಗಳಿಂದಲೇ ಸಹಾಯ ತೆಗೆದುಕೊಳ್ಳಿ. ಇಲ್ಲದೇ ಹೋದಲ್ಲಿ ವಂಚಕರಿಂದ ನಿಮ್ಮ ಹಣ ಕಂಡವರ ಪಾಲಾಗೋದಂತು ಪಕ್ಕಾ.