ಗದಗ: ಶಿಕ್ಷಕರ ಕನಸು ನನಸಾಗಲು ಪಾಲಕರ ಸಹಾಯ ಸಹಕಾರ ಅವಶ್ಯ ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಯದ ನಿರ್ದೇಶಕ ಪ್ರೊ.ರೋಹಿತ ಒಡೆಯರ್ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಮಹಾವಿದ್ಯಾಲಯದ ಪ್ರತಿ ಉಪನ್ಯಾಸಕ ಯಾವ ರೀತಿ ಪಾಠ – ಪ್ರವಚನ ಮಾಡುತ್ತಿದ್ದಾರೆ, ಯಾವ ರೀತಿ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಬಗ್ಗೆ ಅಭಿರುಚಿಯನ್ನು ತುಂಬುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರಲ್ಲದೇ, ಆಡಳಿತ ಮಂಡಳಿಯವರಾದ ತಾವು ಪೂರೈಸಿದ ಸಮಗ್ರ ಸೌಲಭ್ಯಗಳತ್ತಲೂ ಪಾಲಕರ ಗಮನ ಸೆಳೆದರು.
ಇಂದಿನ ವಿದ್ಯಾರ್ಥಿಗಳು ಪಾಠದಲ್ಲಿ ಪ್ರಗತಿ ಸಾಧಿಸಿದ್ದಾರೆ, ಆದರೆ ಪಠ್ಯೇತರ ಚಟುವಟಿಕೆಗಳಲ್ಲಿ ಯಾಕೋ ಅನಾಸಕ್ತರಾಗಿದ್ದಾರೆ. ಆದ್ದರಿಂದ ಪಾಲಕರಾದ ತಾವು ತಮ್ಮ ಮಗುವಿನ ದೈಹಿಕ ಬೆಳವಣಿಗೆಯತ್ತಲೂ ಗಮನಹರಿಸಬೇಕೆಂದು ಸೂಚಿಸಿದರು. ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅವೆರಡರಲ್ಲಿಯೂ ಸಮನ್ವಯ ಸಾಧಿಸುವುದೇ ಸನ್ಮಾರ್ಗ ಮಹಾವಿದ್ಯಾಲಯದ ಸದಾಶಯವಾಗಿದೆ ಎಂದರು.
ಮಹಾವಿದ್ಯಾಲಯದ ಇನ್ನೋರ್ವ ನಿರ್ದೇಶಕ ಪ್ರೊ.ಉಡುಪಿ ದೇಶಪಾಂಡೆ ಸಭೆಯಲ್ಲಿ ಮಾತನಾಡಿ, ಈಬಾರಿ ಪಿ.ಯು.ಬೋರ್ಡನವರು ಅನುಸರಿಸುತ್ತಿರುವ ಪರೀಕ್ಷಾ ಪದ್ಧತಿಯನ್ನು ಪಾಲಕರಿಗೆ ಸವಿಸ್ತಾರವಾಗಿ ವಿವರಿಸಿದರಲ್ಲದೇ, ನಮ್ಮ ಮಹಾವಿದ್ಯಾಲಯದಲ್ಲಿ ಅದಕ್ಕೆ ಪೂರಕವಾಗಿ ಕೈಗೊಂಡ ಚಟುವಟಿಕೆಗಳನ್ನು ಸಭೆಗೆ ಸವಿಸ್ತಾರವಾಗಿ ಹೇಳಿದರು. ವಿಜ್ಞಾನ ಮತ್ತು ವಾಣಿಜ್ಯ ಎರಡೂ ಕ್ಷೇತ್ರಗಳಲ್ಲಿ ಇರುವ ವಿಪುಲ ಉದ್ಯೋಗಾವಕಾಶಗಳ ಬಗ್ಗೆಯೂ, ಸಂಶೋಧನಾ ಕಾರ್ಯಕ್ರಮಗಳ ಬಗ್ಗೆಯೂ ಪಾಲಕರ ವಿದ್ಯಾರ್ಥಿಗಳ ಗಮನ ಸೆಳೆದರು.
ಪಾಲಕರ ಸಭೆಯಲ್ಲಿ ಶ್ರೀ. ಮಹೇಶಗೌಡ.ಟಿ.ಪಾಟೀಲ, ಶ್ರೀ. ಶಂಕರ ಕಲಬುರ್ಗಿ, ಶ್ರೀ. ಪುರಾಣಿಕ ಹಾಗೂ ಶ್ರೀಮತಿ. ಶ್ವೇತಾ ಸಂಕನೂರ ಪಾಲಕರ ಪರವಾಗಿ ಮಾತನಾಡಿದರಲ್ಲದೇ, ಕೆಲವು ಸಲಹೆ ಸೂಚನೆಗಳನ್ನು ಸನ್ಮಾರ್ಗ ಆಡಳಿತ ಮಂಡಳಿಯವರಿಗೆ ಸೂಚಿಸಿದರು. ಮಾತನಾಡಿದ ಮಹನೀಯರೆಲ್ಲರೂ ಸಂಸ್ಥೆ ಹಾಗೂ ಸನ್ಮಾರ್ಗ ಮಹಾವಿದ್ಯಾಲಯದವರು ಶಕ್ತಿಮೀರಿ ಹಮ್ಮಿಕೊಂಡ ಯೋಜನೆಗಳನ್ನು ಉದ್ದೇಶಗಳನ್ನು ಮನಸಾರೆ ಮೆಚ್ಚಿದರು.
ವಾಣಿಜ್ಯ ವಿಭಾಗದ ಕೋ-ಆರ್ಡಿನೇಟರ್ ಪ್ರೊ. ಎಸ್.ಎಸ್.ವಜ್ರಬಂಡಿಯವರು ಪಾಲಕರ ಸಭೆಯಲ್ಲಿ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಜರುಗಿಸಿದ ಕಿರು ಪರೀಕ್ಷೆ, ಮಾಸಿಕ ಪರೀಕ್ಷೆ, ಸರಣಿ ಪರೀಕ್ಷೆಗಳ ನೀಲನಕ್ಷೆ ವಿವರಿಸಿದರಲ್ಲದೇ ಮುಂದಿನ ದಿನಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆಯೂ ಪಾಲಕರ ಗಮನ ಸೆಳೆದರು. ಈ ನಮ್ಮೆಲ್ಲ ಆಸೆ, ಆಕಾಂಕ್ಷೆ ಕನಸು ನನಸಾಗಬೇಕಾದರೆ ಪಾಲಕರ ಹಾಗೂ ವಿದ್ಯಾರ್ಥಿಗಳ ಸಹಾಯ ಸಹಕಾರ ಅವಶ್ಯ ಎಂದು ಆಶಿಸಿದರು.
ಸಭಾ ವೇದಿಕೆಯ ಮೇಲೆ ಆಡಳಿತ ಮಂಡಳಿಯ ಚೇರ್ಮನ್ ಪ್ರೊ.ರಾಜೇಶ ಕುಲಕರ್ಣಿ ಪ್ರಾಚಾರ್ಯರಾದ ಪ್ರೇಮಾನಂದ ರೋಣದ, ಆಡಳಿತಾಧಿಕಾರಿಯಾದ ಶ್ರೀ. ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೋ.ರೋಹಿತ, ಪ್ರೊ. ರಾಹುಲ ಒಡೆಯರ, ಪ್ರೋ.ಪುನೀತ ದೇಶಪಾಂಡೆ, ಪ್ರೋ.ಸೈಯ್ಯದ್ ಮತಿನ್ ಮುಲ್ಲಾ ಉಪಸ್ಥಿತರಿದ್ದರು. ಸಭೆಯಲ್ಲಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರೊ. ಶ್ರೀಶುಭಾ ಶಿರಹಟ್ಟಿ ಪಾಲಕರ ಸಭೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರನ್ನು ಸ್ವಾಗತಿಸಿದರೆ, ಪ್ರೊ. ವಿಜಯ ಹೆಬಸೂರ ವಂದಿಸಿದರು.