ಮುಂಡರಗಿ:ಗದಗ ಜಿಲ್ಲಾ ಪಂಚಾಯತ್ ಸಿಇಒ ಭರತ್ ಎಸ್ ಅವರು ಇಂದು ಬೆಳ್ಳಂ ಬೆಳಿಗ್ಗೆ ತಾಲೂಕಿನ ವಿವಿಧ ಸ್ಥಳಗಳಿಗೆ ದಿಡೀರ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ತಾಲೂಕಿನ ಶಿಂಗಟಾಲೂರು ಗ್ರಾಮದ ಡಿ. ದೇವರಾಜ ಅರಸು ಬಾಲಕರ ವಸತಿ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ವಸತಿ ನಿಲಯದ ವ್ಯವಸ್ಥೆ, ಮೂಲಭೂತ ಸೌಕರ್ಯ, ಅಡುಗೆ ಸಾಮಗ್ರಿ,ಧವಸ ಧಾನ್ಯ, ನಿಯಮದ ಪ್ರಕಾರ ಊಟದ ವಿತರಣೆ ಸೇರಿದಂತೆ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳ ಗುಣಮಟ್ಟವನ್ನ ಪರಿಶೀಲಿಸಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಹಾಸ್ಟೇಲ್ ನ ಸೌಲಭ್ಯಗಳ ಕುರಿತಂತೆ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ವಿದ್ಯಾರ್ಥಿಗಳ ಜೊತೆಗೆ ಕುಳಿತು ಉಪಹಾರ ಸೇವಿಸುವ ಮೂಲಕ ಆಹಾರದ ಗುಣಮಟ್ಟತೆಯನ್ನ ಪರೀಕ್ಷಿಸಿದರು.
ನಂತರ ಹಮ್ಮಿಗಿ ಗ್ರಾಮಕ್ಕೂ ಭೇಟಿ ನೀಡಿ, ಸ್ವಚ್ಛತೆ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿ, ಅಲ್ಲಿನ ಸಮಸ್ಯೆಗಳನ್ನ ಆಲಿಸಿದರು.
ಈ ವೇಳೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.