ಗದಗ: ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಗೃಹಲಕ್ಷ್ಮೀ ಹಣದಿಂದ ಅತ್ತೆ ಸೊಸೆ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿದ ಸುದ್ದಿಯನ್ನ ನಿಮ್ಮ “ಸಿಟಿ ಎಕ್ಸಪ್ರೆಸ್” ನ್ಯೂಸ್ ಮೊದಲು ಬಿತ್ತರಿಸಿತ್ತು. ಅಷ್ಟೇ ವೇಗವಾಗಿ ಈ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು.
ಇದರ ಬೆನ್ನಲ್ಲೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅತ್ತೆ-ಸೊಸೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, “ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ, ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗದ ಮಾಲಧಾರ ಓಣಿಯ ಅತ್ತೆ – ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ” ಎಂದು DK ಶಿವಕುಮಾರ್ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನ ಕೂಡಿಟ್ಟು, ಅತ್ತೆ ಸೊಸೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಆ ಹಣವನ್ನ ಬಳಕೆ ಮಾಡಿದ್ದರು.ಈ ಕುರಿತು ನಿಮ್ಮ “ಸಿಟಿ ಎಕ್ಸಪ್ರೆಸ್” ನ್ಯೂಸ್ ಮೊದಲು ವಿಸ್ಕೃತ ವರದಿ ಬಿತ್ತರಿಸಿತ್ತು.