ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2025 ಜನವರಿಯಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿಯ ಸಂಗಮ್ ನಗರಿಯಲ್ಲಿ ಆಯೋಜಿಸಿದ್ದ ಸುಮಾರು 5500 ಕೋಟಿ ರೂಪಾಯಿ ವೆಚ್ಚದ 167 ಯೋಜನೆ, ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕುಂಭ ಮೇಳವು ಉದ್ಯೋಗ ಸೃಷ್ಟಿ ಹಾಗೂ ಅರ್ಥಿಕ ವಿಕಾಸಕ್ಕೂ ಕಾರಣವಾಗುತ್ತದೆ. 2019ರ ಕುಂಭ ಮೇಳ ಸ್ವಚ್ಛತೆಯಿಂದ ವಿಶ್ವದ ಗಮನ ಸೆಳೆದಿತ್ತು. ಈ ಬಾರಿಯೂ ಸ್ವಚ್ಛತೆ ಕಾಪಾಡುವ ಸಫಾಯಿ ಕರ್ಮಚಾರಿಗಳ ಕೆಲಸ ಬಹಳ ಮಹತ್ವದ್ದಾಗಿದೆ. ಸ್ವಚ್ಛತೆ ಕರ್ಮಚಾರಿಗಳ ಕಾಲು ತೊಳೆದು ಗೌರವ ಸೂಚಿಸಿದ್ದು ನನ್ನ ಜೀವನದ ಸ್ಮರಣೀಯ ದಿನವಾಗಿದೆ ಎಂದು ಸ್ಮರಿಸಿದರು.
ಇಂದು ಕುಂಭ ಮೇಳದಲ್ಲಿ ಏಕ ಭಾರತದ ಶ್ರೇಷ್ಠ ಭಾರತ ಕಲ್ಪನೆಯ ಅದ್ಭುತ ಚಿತ್ರಣವನ್ನು ಕಾಣಬಹುದು. ಹಿಂದೆಯೂ ಕುಂಭ ಮೇಳದಲ್ಲಿಯೇ ಭವಿಷ್ಯದಲ್ಲಿ ದೇಶ ಹೇಗಿರಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರಗಳು ಆಗುತ್ತಿದ್ದವು. ಸಾಧು- ಸಂತರು ವಾದ- ಸಂವಾದ ನಡೆಸಿ ದೇಶಕ್ಕೆ ಉಪಯುಕ್ತವಾದ ಮಹತ್ವದ ನಿರ್ಣಯ ಕೈಗೊಳ್ಳುತ್ತಿದ್ದರು. ಇಂದು ಸಹ ಹಾಗೇಯೇ ಇದೆ. ಸಮಾಜಕ್ಕೆ ಸಕಾರಾತ್ಮಕ ಸಂದೇಶ ಸಿಗುತ್ತಿದೆ ಎಂದು ಹೇಳಿದರು.
ಹಿಂದಿನ ಸರ್ಕಾರಗಳು ಕುಂಭ ಮೇಳಕ್ಕೆ ಮಹತ್ವ ಕೊಟ್ಟಿರಲಿಲ್ಲ. ಅವ್ಯವಸ್ಥೆಯಿಂದ ಭಕ್ತರು ಕಷ್ಟಪಟ್ಟರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಭಾರತದ ಸಂಸ್ಕೃತಿ, ಧಾರ್ಮಿಕತೆ ಬಗ್ಗೆ ಆಸಕ್ತಿಯೇ ಇರಲಿಲ್ಲ ಎಂದು ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷದ ಸರ್ಕಾರಗಳನ್ನು ಟೀಕಿಸಿದ ಅವರು ಇಂದು ಭಾರತದ ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವದಿಂದ ನೋಡುವ ಸರ್ಕಾರವಿದೆ. ಡಬಲ್ ಇಂಜಿನ್ ಸರ್ಕಾರಕ್ಕೆ ಉತ್ತರದಾಯಿತ್ವದ ಅರಿವಿದೆ ಎಂದರು.
ಗಂಗಾ ನದಿಯ ತಟದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಂಬಿಕೆ ರಾಜ ಮಹಾರಾಜರ ಕಾಲದಿಂದಲೂ ಇದೆ. ಇದೇ ನಂಬಿಕೆಯೇ ಅಪಾರ ಸಂಖ್ಯೆಯಲ್ಲಿ ಜನರನ್ನು ಸಂಗಮ ತಟಕ್ಕೆ ಕರೆ ತರುತ್ತದೆ. ಇಂಥ ಸಮಾಗಮ ಬೇರೆಲ್ಲೂ ನೋಡಲು ಸಿಗುವುದಿಲ್ಲ. ದೇಶದ ಯಾವುದೇ ಮೂಲೆಯಿಂದ ಮಹಾಕುಂಭ ಮೇಳಕ್ಕೆ ತಲುಪಲು ಸಂಪರ್ಕ ವ್ಯವಸ್ಥೆ ಮಾಡಿದ್ದೇವೆ ಎಂದರು. ಜನವರಿ 13 ರಿಂದ ಆರಂಭಗೊಂಡು 45 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳಕ್ಕೆ ಪ್ರತಿ ದಿನ ಆಗಮಿಸುವ ಲಕ್ಷಾಂತರ ಜನರ ಸೇವೆ ಹಾಗೂ ಸ್ವಾಗತಕ್ಕೆ ತಯಾರಿ ನಡೆಸುವುದು ಅಭೂತಪೂರ್ವ ಕೆಲಸವಾಗಿದೆ. ಈ ಬಾರಿಯ ಮಹಾಕುಂಭ ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲಿದೆ ಎಂದರು.