ಲಕ್ಷ್ಮೇಶ್ವರ: ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆ, ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿಯೂ ಪಂಚಮಸಾಲಿ ಸಮಾಜದಿಂದ ಪಾಲಾ ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ತಾಲೂಕ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಮತ್ತು ಮಹಿಳೆಯರು, ವೃದ್ದರು ಎನ್ನದೇ ಲಾಠಿ ಮೂಲಕ ಹಲ್ಲೆ ನಡೆಸಿದ ಪೋಲಿಸ್ ಇಲಾಖೆಯ ಅಧಿಕಾರಿಗಳನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಪಟ್ಟಣದ ಸೋಮೆಶ್ವರ ದೇವಸ್ಥಾನದಿಂದ, ಹಾವಳಿ ಆಂಜನೇಯ ದೇವಸ್ಥಾನ, ಪಾದಗಟ್ಟಿ, ಶಿಗ್ಲಿ ನಾಕಾ ಮೂಲಕ ಹೊಸ ಬಸ್ ನಿಲ್ದಾಣದ ಮಾರ್ಗಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ, ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಈ ವೇಳೆ ಸಂಚಾರ ಅಸ್ತವ್ಯಸ್ತವಾಗಿ ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಶಿಲ್ದಾರ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಕಳಿಸಲಾಗುವುದು ಎಂದು ಹೇಳಿದರು.
ಪಿಎಸ್ಐ ನಾಗರಾಜ ಗಡಾದ ನೇತೃತ್ವದಲ್ಲಿ ಪೋಲಿಸ್ ಬಿಗಿಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಎಸ್.ಪಿ.ಬಳಿಗಾರ, ಸೋಮಣ್ಣ ಡಾನಗಲ್, ಎಂ.ಎಸ್.ದೊಡ್ಡಗೌಡರ ಎಂ.ಆರ್.ಪಾಟೀಲ್, ಬಸವೇಶ ಮಹಾಂತಶೇಟ್ಟರ,ಶಂಕರ ಬ್ಯಾಡಗಿ, ನಿಂಬಣ್ಣ ಮಡಿವಾಳರ, ಮಲಾದೇವಿ ದಂದರಗಿ, ಸಲೋಚನಾ, ಶೈಲಕ್ಕ ಆದಿ, ಪ್ರಕಾಶ ಮಾದನೂರ, ಬಸವರಾಜ ಹೋಗೆಸೊಪ್ಪಿನ, ಚಂದ್ರು ಮಾಗಡಿ ಸೇರಿದಂತೆ ಸಮಾಜದ ಅನೇಕರು ಪಾಲ್ಗೊಂಡಿದ್ದರು.