ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತಿಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಡಿಸೆಂಬರ್ 9 ರಂದು ಪಾಣಿಪತ್ನಲ್ಲಿ ‘ಬಿಮಾ ಸಖಿ ಯೋಜನೆ’ ಗೆ ಚಾಲನೆ ನೀಡಲಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಈ ಯೋಜನೆಯು 10 ನೇ ತರಗತಿ ಉತ್ತೀರ್ಣರಾದ 18-70 ವರ್ಷ ವಯಸ್ಸಿನ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತಿಯನ್ನು ಉತ್ತೇಜಿಸಲು ಆಯ್ಕೆಯಾದ ಮಹಿಳೆಯರು ಮೊದಲ ಮೂರು ವರ್ಷಗಳವರೆಗೆ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ಪಡೆಯುತ್ತಾರೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ತರಬೇತಿಯ ನಂತರ, ಅವರು ಎಲ್ಐಸಿ ಏಜೆಂಟರಾಗಿ ಸೇವೆ ಸಲ್ಲಿಸಬಹುದು ಮತ್ತು ಪದವೀಧರ ಬಿಮಾ ಸಖಿಯರು ಎಲ್ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉದ್ಘಾಟನೆಯ ಸಮಯದಲ್ಲಿ, ಪ್ರಧಾನಿಯವರು ಆಯ್ಕೆಯಾದ ಕೆಲ ಬಿಮಾ ಸಖಿಯರಿಗೆ ನೇಮಕಾತಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.
ಇದಲ್ಲದೆ, ಕರ್ನಾಲ್ನ ಮಹಾರಾಣಾ ಪ್ರತಾಪ್ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ಗೆ ಪಿಎಂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 495 ಎಕರೆ ಪ್ರದೇಶ ವಿಸ್ತಾರ ಹೊಂದಿರುವ ಮುಖ್ಯ ಕ್ಯಾಂಪಸ್ ಮತ್ತು ಆರು ಪ್ರಾದೇಶಿಕ ಸಂಶೋಧನಾ ಕೇಂದ್ರಗಳನ್ನು 700 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದು ತೋಟಗಾರಿಕೆ ಕಾಲೇಜು ಮತ್ತು 10 ತೋಟಗಾರಿಕೆ ವಿಭಾಗಗಳನ್ನು ಒಳಗೊಂಡ ಐದು ಶಾಲೆಗಳನ್ನು ಹೊಂದಿರುತ್ತದೆ. ಇದು ಬೆಳೆ ವೈವಿಧ್ಯೀಕರಣ ಮತ್ತು ತೋಟಗಾರಿಕೆಯ ವಿಶ್ವದರ್ಜೆಯ ತಂತ್ರಜ್ಞಾನಗಳ ಅಭಿವೃದ್ಧಿಯ ಸಂಶೋಧನೆಯಲ್ಲಿ ಒತ್ತು ನೀಡಲಿದೆ.