ಗದಗ: ರಾಜ್ಯ ಸರ್ಕಾರದಲ್ಲಿ ಸದ್ದು ಮಾಡುತ್ತಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಇವರಿಬ್ಬರ ‘ಅಧಿಕಾರ ಒಪ್ಪಂದ’ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮಾಧ್ಯಮದವರು ಈ ವಿಷಯವನ್ನ ಪದೆಪದೆ ಎತ್ತಿ ತೋರಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಹೈಕಮಾಂಡ್ ಏನ್ ಹೇಳ್ತಾರೆ ಹಾಗೆ ಕೇಳ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಭಿನ್ನಾಭಿಪ್ರಾಯ ಇಲ್ಲ. ಸಿಎಂ ಹೇಳಿದ್ದು ಅಂತಿಮ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ವತಃ ಹೇಳಿದ್ದಾರೆ. ಹೀಗಿರುವಾಗ ಮತ್ತೇನು ಬೇಕು. ಈ ವಿಷಯವನ್ನ ಕ್ಲೋಸ್ ಮಾಡ್ಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಬಳ್ಳಾರಿ ಬಾಣಂತಿಯರ ಸಾವು ಪ್ರಕರಣದ ವಿಚಾರವಾಗಿ ಮಾತನಾಡಿದ ಸಚಿವರು, ಸಾವಿಗೆ ಕಾರಣರಾದವರ ಮೇಲೆ ಕ್ರಮ ನಿಶ್ಚಿತ. ಪ್ರಕರಣ ಯಾಕೆ ಜರುಗಿತು ಅನ್ನೋದು ಈಗಾಗಲೇ ಬಹಿರಂಗವಾಗಿದೆ. ಪರಿಹಾರ ಎಷ್ಟು ಕೊಟ್ಟರೂ ಕಡಿಮೆಯೇ, ಆದರೆ ಇಲ್ಲಿ ಪ್ರಶ್ನೆ ಪರಿಹಾರದಲ್ಲ, ಉಪ ಚುನಾವಣೆಯಲ್ಲಿ ಸೋತಿರೋ ಬಿಜೆಪಿ ಈ ಪ್ರಕರಣವನ್ನ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.
ಪ್ರಕರಣ ಸಂಬಂಧ ಏನು ಕ್ರಮ ಕೈಗೊಳ್ಳುವುದು ಬಾಕಿ ಇದೆ ಎಂದು ವಿಪಕ್ಷಗಳು ಹೇಳಲಿ, ರಾಜ್ಯ ಸರ್ಕಾರ ತೆರೆದ ಮನಸ್ಥಿತಿಯಲ್ಲಿದ್ದು, ಸದನದಲ್ಲಿ ಪ್ರಕರಣದ ಕುರಿತು ನಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೇಳುತ್ತೇವೆ ಎಂದರು.