ಗದಗ: ಆನ್ಲೈನ್ ಗೇಮ್ ನಿಂದಾಗಿ ಹಣ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಹಳೇ ಡಿಸಿ ಕಚೇರಿ ಬಳಿಯ ಲಾಡ್ಜ್ ನಲ್ಲಿ ನಡೆದಿದೆ.
ಜಗದೀಶ್ ಹಳೇಮನಿ (37) ಎನ್ನುವಾತ ಮೃತ ದುರ್ದೈವಿಯಾಗಿದ್ದು, ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಮೆಟಲ್ ಸ್ಟೋರ್ ಅಂಗಡಿಯ ಮಾಲೀಕನಾಗಿದ್ದಾನೆ. ಈತನು ಆನ್ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ.ಕಳೆದುಕೊಂಡಿದ್ದನು ಎನ್ನಲಾಗಿದೆ.
ಹೀಗಾಗಿ ಮಾನಸಿಕವಾಗಿ ಖಿನ್ನತೆ ಹೊಂದಿದ್ದ ಈತನು, ನಿನ್ನೆ ರಾತ್ರಿ (ನ.30) ಸುಮಾರಿಗೆ ಶಿರಹಟ್ಟಿಯಿಂದ ಗದಗನ ಲಾಡ್ಜ್ ಗೆ ಬಂದು ರೂಮ್ ನಲ್ಲಿ ವಾಸವಾಗಿದ್ದ.
ಇಂದು ಮಧ್ಯಾಹ್ನವಾದರೂ (ಡಿ.1) ರೂಮ್ ನಿಂದ ಯುವಕ ಹೊರಬಾರದ ಕಾರಣ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ, ಸಂಬಂಧಪಟ್ಟವರಿಗೆ ವಿಷಯ ತಿಳಿಸಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿರುವದು ತಿಳಿದು ಬಂದಿದೆ.
ಇನ್ನು ಅತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರೋ ಯುವಕ, ಸರ್ಕಾರದಿಂದಲೇ ಆನ್ಲೈನ್ ಗೇಮ್ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರಲ್ಲಿ ವಿನಂತಿಸಿದ್ದಾನೆ. ದಯವಿಟ್ಟು ಆನ್ಲೈನ್ ಗೇಮ್ ಬ್ಯಾನ್ ವಿಷಯವನ್ನ ಸದನದಲ್ಲಿ ಪ್ರಸ್ತಾಪಿಸಿ, ಆನ್ಲೈನ್ ಗೇಮ್ ಗಳಿಗೆ ಕಡಿವಾಣ ಹಾಕಿ,ನನ್ನಂತೆ ಬಹಳಷ್ಟು ಯುವಕರು ಇದರಿಂದ ಹಾಳಾಗಿದ್ದಾರೆ, ಹೀಗಾಗಿ ದಯವಿಟ್ಟು ಆನ್ಲೈನ್ ಗೇಮ್ ಸರ್ಕಾರವೇ ಬ್ಯಾನ್ ಮಾಡುವಂತೆ ಅಧಿವೇಶನದಲ್ಲಿ ಚರ್ಚೆ ಮಾಡಿ ಎಂದು ಶಾಸಕ ಚಂದ್ರು ಲಮಾಣಿಯವರಿಗೆ ಡೆತ್ ನೋಟ್ ನಲ್ಲಿ ಬರೆದು ಮನವಿ ಮಾಡಿದ್ದಾನೆ.
ಘಟನೆ ಬಳಿಕ ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.