ಗದಗ: ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಈ ಮೊದಲಿದ್ದ ಕಪ್ಪತಗುಡ್ಡದ ವನ್ಯಜಿವಿಧಾಮ ಕೇಂದ್ರಸ್ಥಾನದಿಂದ 10 ಕಿಮೀ ವ್ಯಾಪ್ತಿಯನ್ನು 1 ಕಿಮೀ ವ್ಯಾಪ್ತಿಗೆ ಸೀಮಿತಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಗೆಜೆಟ್ ವಿರೋಧಿಸಿ ಮತ್ತು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಹಾಗೂ ಇನ್ನಿತರ ಕನ್ನಡಪರ ಸಂಘನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಸಂಘಟನೆಯ ಮುಖಂಡ ಚಂದ್ರು ಚವಾಣ್ ಮಾತನಾಡಿ, ಕಳೆದ ಸೆ. 30ರಂದು ಕೇಂದ್ರ ಸರ್ಕಾರ 10 ಕಿಮೀ ವ್ಯಾಪ್ತಿ ಬದಲಾಗಿ 1 ಕಿಮೀ ವ್ಯಾಪ್ತಿಗೆ ಗಣಿಗಾರಿಕೆ ಮಿತಿಯನ್ನು ಇಳಿಸಿ ಗೆಜೆಟ್ ಹೊರಡಿಸಿದೆ. ಗೆಜೆಟ್ ದಿನಾಂಕದಿಂದ 60 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಧಿ ನೀಡಿದೆ. ಆದರೆ, ಗೆಜೆಟ್ ಹೊರಡಿಸಿದ್ದ ಬಗ್ಗೆ ವ್ಯಾಪಕ ಪ್ರಚಾರ ನೀಡಿಲ್ಲ. ಹೀಗಾಗಿ ಆಕ್ಷೇಪಣೆ ಸಲ್ಲಿಸುವ ಮಾಹಿತಿ ಈ ಭಾಗದ ಜನರಿಗೆ ಮಾಹಿತಿ ಇಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಕ್ಷೇಪಣೆ ಸಲ್ಲಿಸುವ ಕುರಿತು ವ್ಯಾಪಕ ಪ್ರಚಾರ ನೀಡಬೇಕಿತ್ತು. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಉದ್ದೇಶದಿಂದಲೇ ಈ ತಂತ್ರಗಾರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸಿವೆ ಎಂದು ಆರೋಪಿಸಿದರು.
ಜಿಲ್ಲೆಯ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರುವರೆಗೆ ಚಾಚಿಕೊಂಡಿರುವ ಕಪ್ಪತ್ತಗುಡ್ಡವು ಜಿಲ್ಲೆಯ ಉತ್ತರದಿಂದ ದಕ್ಷಿಣಕ್ಕೆ ಸುಮಾರು 65 ಕಿಮೀ ಗಳಷ್ಟು ಉದ್ದಕ್ಕೆ ಹರಡಿಕೊಂಡಿದೆ. ಇದು ಸಣ್ಣಪುಟ್ಟ ಗುಡ್ಡಗಳ ಸಾಲುಗಳಿಂದ ಕೂಡಿದ್ದು, ಈ ಗುಡ್ಡಗಳು ಸುಮಾರು 2 ಕಿಮೀ ಯಿಂದ 10 ಕಿಮೀ.ಗಳಷ್ಟು ಅಗಲವಾಗಿದೆ. ಒಟ್ಟು 32,346.524 ಹೆಕ್ಟೇರ ಪ್ರದೇಶ (80 ಸಾವಿರ ಎಕರೆ ಅರಣ್ಯ ಪ್ರದೇಶ) ವಿಸ್ತಾರ ಹೊಂದಿದೆ. ಈ ಪ್ರದೇಶವು 244.5 ಚ.ಕಿ.ಮೀ. ವ್ಯಾಪಿಸಿದೆ. ಪ್ರಮುಖವಾಗಿ ಸೂಜಿ ಮಡ್ಡಿ, ಕೆಂಪಗುಡ್ಡ, ಗಾಳಿ ಗುಂಡಿ, ಎತ್ತಿನ ಗುಡ್ಡ, ಆನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ಗುಡ್ಡ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಹಲವು ಹೆಸರಿನ ಗುಡ್ಡಗಳನ್ನು ಹೊಂದಿದೆ. ವಿಶಾಲವಾಗಿ ಹರಡಿಕೊಂಡಿರುವ ಈ ಗುಡ್ಡಗಳಲ್ಲಿ ಹತ್ತಾರು ವನ್ಯ ಪ್ರಾಣಿ & ಪಕ್ಷಿಗಳು, ಔಷಧಿ ಸಸ್ಯಗಳು ಮತ್ತು ಬಗೆ ಬಗೆಯ ಪ್ರಭೇದದ ಮರಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುತ್ತದೆ.
ಪಾರಂಪರಿಕ ವೈದ್ಯರು ಇಲ್ಲಿಗೆ ಆಗಮಿಸಿ ವನಸ್ಪತಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ.ಪುರಾಣದಲ್ಲೂ ಸಸ್ಯಗಿರಿ ಎಂದು ಪ್ರಸಿದ್ಧಿ ಪಡೆದಿದೆ. ಕಪ್ಪತ್ತಗುಡ್ಡದಲ್ಲಿ ಕತ್ತೆಕಿರುಬ, ಚಿರತೆ, ನರಿ, ತೋಳ, ಕಾಡುಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ ಸೇರಿದಂತೆ ಅಪರೂಪದ ಪ್ರಾಣಿಗಳಾದ ಚಿಂಕಾರ ಹಾಗೂ ರೆಸ್ಟಿ ಸ್ಪಾಟೆಡ್ ಬೆಕ್ಕುಗಳು ಇವೆ. ಖನಿಜ ಸಂಪತ್ತಾದ ಸೀಸ, ಮ್ಯಾಂಗನೀಸ್, ಕಬ್ಬಿಣ, ಬಂಗಾರ ಹೀಗೆ 18 ಬಗೆಯ ಖನಿಜಗಳು ಕಪ್ಪತಗುಡ್ಡದ ಗರ್ಭದಲ್ಲಿದೆ.
ಇಲ್ಲಿ ಸಿಗುವ ಬಾರಿ ಹಣ್ಣು, ನೆಲ್ಲಿಕಾಯಿ, ಊಟದ ಎಲೆ, ಬಿಕ್ಕಿ ಹಣ್ಣು, ಪೇರಲ, ಪೂಜೆಗಾಗಿ ಲೋಬಾನ, ಬೆತ್ತ, ಹಾಗೂ ಜೇನು ತುಪ್ಪ ಇತರೆ ದೈನಂದಿನ ವಸ್ತುಗಳನ್ನು ಇಲ್ಲಿನ ಜನರು ದಿನನಿತ್ಯದ ಬಳಕೆಗಾಗಿ ಉಪಯೋಗಿಸುತ್ತಿದ್ದಾರೆ. ಈ ಎಲ್ಲ ವಿಷಯಗಳು ಸರ್ಕಾರಕ್ಕೆ ತಿಳಿಸಿದ್ದರೂ ಸರ್ಕಾರಗಳು ಕಪ್ಪತಗುಡ್ಡದ ರಕ್ಷಣೆಗೆ ಮುಂದಾಗದೆ ಇಲ್ಲಿನ ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಈ ತಂತ್ರಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.
ಕಪ್ಪತಗುಡ್ಡದ ಮಹತ್ವ ಅರಿತಿದ್ದ ಬ್ರಿಟಿಷ್ ಸರ್ಕಾರ ಮಾ 2, 1882ರಲ್ಲಿಯೇ ಅದನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿತ್ತು. ಡಿ.19, 2015 ರಲ್ಲಿ 1972 ರ ವನ್ಯಜಿವಿ ಕಾಯ್ದೆಯ 36ಎ ಪ್ರಕಾರ ಕಪ್ಪತಗುಡ್ಡದ ಒಟ್ಟು 17,872 ಹೆಕ್ಟೇರ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಅರಣ್ಯ, ಪರಿಸರ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಎಲ್ಲ ವರದಿಗಳನ್ನು ಪರಿಗಣಿಸಿ ಸರ್ಕಾರವು ಮೇ 16, 2019ರಂದು ಕಪ್ಪತ್ತಗುಡ್ಡ ವನ್ಯಜಿವಿ ಧಾಮವೆಂದು ಘೋಷಿಸಿತು.
ಹಾಗಾಗಿ ಈ ಎಲ್ಲ ಆದೇಶಗಳನ್ನು ಪರಿಗಣಿಸಿ, ಇಲ್ಲಿನ ಜನಾಕ್ರೋಶಕ್ಕೆ ಮನ್ನಣೆ ನೀಡಿ ಗಣಿಗಾರಿಕೆ ನಿಷೇಧಿಸಬೇಕೆಂದು ಚಂದ್ರು ಚವಾಣ್ ಆಗ್ರಹಿಸಿದರು.
ಪ್ರತಿಭಟನೆ ಸಮಯದಲ್ಲಿ ಹಾಜರಿದ್ದರು
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ ರಮೆಶ ರಾಠೂಡ ನವಿನ ಬಂಡಾರಿ ದಾದು ಮುಂಡರಗಿ ಗವಿಸಿದ್ದಯ್ಯ ಹಳ್ಳಿಕೆರಿ ಸಾದಿಕ ಗುಳಗುಂದಿ ನಿಜಾಮ ಹುಬ್ಬಳ್ಳಿ ವಿಕಾಸ ಕ್ಷಿರಸಾಗರ ಅಶರಪ ಇಬ್ರಾಹಿಂ ರಶಿದ ಮಕಾಂದಾರ ಮುಂತಾದವರು ಉಪಸ್ಥಿತರಿದ್ದರು.