ಲಕ್ಷ್ಮೇಶ್ವರ: ಶಕ್ತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದ ಬಸ್ ಗಳನ್ನೇ ತಮ್ಮ ಕಳ್ಳತನದ ಅಡ್ಡಾ ಮಾಡಿಕೊಂಡು, ಆಭರಣಗಳನ್ನ ದೋಚುತ್ತಿದ್ದ, ಇಬ್ಬರು ಮಹಿಳೆಯರನ್ನ ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಶಾಂತಿ ವಡ್ಡರ ಹಾಗೂ ಸುಶೀಲಮ್ಮಾ ವಡ್ಡರ ಅನ್ನೋ ಆಭರಣ ಕಳ್ಳಿಯರನ್ನ ಬಂಧಿಸಿ, ಆರೋಪಿಗಳಿಂದ ಒಟ್ಟು 2.60 ಲಕ್ಷ ಮೌಲ್ಯದ, 55 ಗ್ರಾಂ ಬಂಗಾರದ ಆಭರಣಗಳನ್ನು ಪತ್ತೆ ಮಾಡಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಬಸ್ ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಇಬ್ಬರು ಮಹಿಳಾ ಕಳ್ಳಿಯರು, ರಶ್ ಗಳಿರುತ್ತಿದ್ದ ಬಸ್ ನಲ್ಲಿ ಎಂಟ್ರಿ ಕೊಟ್ಟು, ಮಹಿಳಾ ಪ್ರಯಾಣಿಕರ ಲಗೇಜ್ ಬ್ಯಾಗ್, ವ್ಯಾನಿಟಿ ಬ್ಯಾಗ್ ಗಳಿಂದ ಆಭರಣ ಎಗರಿಸಿ, ಅಲ್ಲದೇ, ಅವರ ಗಮನ ಬೇರೆಡೆ ಸೆಳೆದು, ಅವರಲ್ಲಿದ್ದ ಚಿನ್ನದ ಸರಗಳನ್ನ ಎಗರಿಸುತ್ತಿದ್ದರು. ಬೇರೆ ಜಿಲ್ಲೆಯಲ್ಲದೇ, ಇತ್ತೀಚೆಗೆ ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿಯೂ ಸಹ ಕಳ್ಳಿಯರು ತಮ್ಮ ಕರಾಮತ್ತು ತೋರಿಸಿದ್ದರು.
ಸದ್ಯ ಈ ಇಬ್ಬರೂ ಮಹಿಳೆಯರನ್ನ ಬಂಧಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಗದಗ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ, ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ತಂಡ ರಚಿಸಿ ಮಹಿಳಾ ಕಳ್ಳರನ್ನ ಪತ್ತೆ ಹಚ್ಚಿದ್ದಾರೆ.
ಪಿ ಎಸ್ ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿ ಎಸ್ ಐ, ಟಿ ಕೆ ರಾಠೋಡ, ಎ ಎಸ್ ಐ,ಎನ್ ಎ ಮೌಲ್ವಿ, ಗುರು ಬೂದಿಹಾಳ, ಎಮ್ ಎಮ್ ಶೀಗಿಹಳ್ಳಿ, ಆರ್ ಎಸ್ ಯರಗಟ್ಟಿ,ಎಮ್ ಎ ಶೇಖ, ಎಮ್.ಎಸ್ ಬಳ್ಳಾರಿ, ಎ.ಆರ್ ಕಮ್ಮಾರ, ಸಿ ಎಸ್ ಮಠಪತಿ, ಡಿ ಎಸ್ ನದಾಫ, ಎಚ್ ಐ ಕಲ್ಲಣ್ಣವರ, ಪಾಂಡುರಂಗರಾವ್, ಮಧುಚಂದ್ರ ಧಾರವಾಡ, ನಂದಯ್ಯ ಮಠಪತಿ, ಸೋಮು ವಾಲ್ಮೀಕಿ, ಸಂಜೀವ ಕೊರಡೂರ, ವಿದ್ಯಾಶ್ರೀ ಹದ್ಲಿ ಸೇರಿದಂತೆ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಎಲ್ಲರಿಗೂ ಎಸ್ಪಿ ಬಿ.ಎಸ್.ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.