ನವದೆಹಲಿ: ಪ್ಯಾನ್ 2.0 ಯೋಜನೆಯಲ್ಲಿ ಕ್ಯೂಆರ್ ಕೋಡ್ ಹೊಂದಿರುವ ಹೊಸ ಪ್ಯಾನ್ ಕಾರ್ಡ್ ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ಯಾನ್ 2.0 ಪ್ರಾಜೆಕ್ಟ್ ಅಸ್ತಿತ್ವದಲ್ಲಿರುವ PAN/TAN 1.0 ಫ್ರೇಮ್ವರ್ಕ್ನ ಅಪ್ಗ್ರೇಡ್ ಆವೃತ್ತಿಯಾಗಿದ್ದು, ಪ್ಯಾನ್ ಪರಿಶೀಲನೆ ಸೇವೆಯನ್ನು ಮತ್ತಷ್ಟು ಸುಲಭ ಮತ್ತು ಸುರಕ್ಷತೆ ಗೊಳಿಸುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ, ದೇಶದಲ್ಲಿ ಸುಮಾರು 78 ಕೋಟಿ ಪ್ಯಾನ್ಗಳನ್ನು ನೀಡಲಾಗಿದ್ದು, ಈ ಪೈಕಿ ಶೇ 98ರಷ್ಟು ಪ್ಯಾನ್ಗಳನ್ನು ವೈಯಕ್ತಿಕವಾಗಿ ನೀಡಲಾಗಿದೆ.
ಸರ್ಕಾರಿ ಇಲಾಖೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಲ್ಲಿ ಪ್ಯಾನ್ ಅನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಸುವುದು ಇದರ ಹಿಂದಿನ ಉದ್ದೇಶ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂಪಾಯಿ ವ್ಯಯಿಸಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಗ್ರಾಹಕರ ಗುರುತಿನ ವಿವರಗಳನ್ನು ಪಡೆಯಲು ಇದು ಸಾಧ್ಯವಾಗುತ್ತದೆ. ಡಿಜಿಟಲ್ ಸೇವೆಗಳ ಅನುಮೋದನೆಯನ್ನು ತ್ವರಿತಗೊಳಿಸಬಹುದು ಮತ್ತು ಗುಣಮಟ್ಟವೂ ಸುಧಾರಿಸಲಿದೆ. ಎಲ್ಲಾ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಜೊತೆಗೆ ಡೇಟಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಪರಿಸರಸ್ನೇಹಿ ಯಾಗಿರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪ್ಯಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.