Home » News » ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆಗಳೇ ಸೋಲು! ಅಜ್ಜ, ಅಪ್ಪನ ನಂತರ ಈಗ ಮೊಮ್ಮಗನಿಗೂ ಕಾಡಿದ ಸೋಲಿನ ಪರಂಪರೆ!

ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆಗಳೇ ಸೋಲು! ಅಜ್ಜ, ಅಪ್ಪನ ನಂತರ ಈಗ ಮೊಮ್ಮಗನಿಗೂ ಕಾಡಿದ ಸೋಲಿನ ಪರಂಪರೆ!

by CityXPress
0 comments

ಶಿಗ್ಗಾವಿ: ಬೊಮ್ಮಾಯಿ ಕುಟುಂಬಕ್ಕೆ ಅದ್ಯಾಕೋ ಗೊತ್ತಿಲ್ಲ, ಅವರ ಮನೆತನಕ್ಕೆ ಹಾಗೂ ಮೊದಲ ಚುನಾವಣೆಗೂ ಸೋಲಿನ ನಂಟು ಇದೆಯೆನೋ ಅನ್ನೋ ಪ್ರಶ್ನೆ ಕಾಡುತ್ತೆ? ಕಾರಣ ಈ ಬಾರಿಯೂ ಮೊದಲ ಚುನಾವಣೆ ಹಾಗೂ ಸೋಲಿಗೂ ಇರುವ ನಂಟು ಮುಂದುವರಿದಿದೆ.

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಸೋಲು ಕಂಡಿದ್ದಾರೆ. ಅವರ ಅಜ್ಜ, ಎಸ್‌ಆರ್ ಬೊಮ್ಮಾಯಿ ಮತ್ತು ತಂದೆ ಬಸವರಾಜ ಬೊಮ್ಮಾಯಿ ಕೂಡ ತಾವು ಸ್ಪರ್ಧೆ ಮಾಡಿದ್ದ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ರಾಜ್ಯ ರಾಜಕಾರಣದಲ್ಲಿ ಅಜ್ಜ ಮಗ, ಮೊಮ್ಮಗ ಹೀಗೆ ಮೂರು ತಲೆಮಾರಿನ ರಾಜಕೀಯ ಇತಿಹಾಸವಿರುವ ಬೊಮ್ಮಾಯಿ ಕುಟುಂಬಕ್ಕೆ ಮೊದಲ ಈ ಚುನಾವಣೆಯಲ್ಲಿ ಸೋಲಿನ ಪರಂಪರೆಯೂ ಇದೆ. ಪ್ರಸಕ್ತ ನಡೆದ ಉಪ ಚುನಾವಣೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್ ಬೊಮ್ಮಾಯಿ ಕೂಡ ಪ್ರಥಮ ಚುನಾವಣೆಯಲ್ಲಿ ಸೋಲುವ ಮೂಲಕ ಆ ಪರಂಪರೆ ಮುಂದುವರಿದಿದೆ.

ಹೌದು, ಬಸವರಾಜ ಬೊಮ್ಮಾಯಿಯವರ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಇವರ ಪುತ್ರನಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಇವರ ಪುತ್ರ ಭರತ್ ಬೊಮ್ಮಾಯಿ ಚುನಾವಣಾ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಸಹ ತಾವು ಎದುರಿಸಿರುವ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಸೋಲು ಕಂಡವರೇ ಇದ್ದಾರೆ.

banner

ವಕೀಲರಾಗಿದ್ದ ಎಸ್‌ ಆರ್.ಬೊಮ್ಮಾಯಿ ಪ್ರಥಮ ಬಾರಿಗೆ 1962 ರಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಕೆ. ಕಾಂಬಳೆ ವಿರುದ್ಧ ಸೋಲು ಅನುಭವಿಸಿದರು. 1967ರಲ್ಲಿ ಆದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಟಿ.ಕೆ ಕಾಂಬಳೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರದಲ್ಲಿ ಎಸ್.ಆರ್ .ಬೊಮ್ಮಾಯಿ ಜನತಾ ಪಕ್ಷದ ಹುರಿಯಾಳಾಗಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ 1978 ರಿಂದ 1985ರ ಚುನಾವಣೆಯಲ್ಲಿ ಸತತ ಗೆಲವು ಸಾಧಿಸಿದ್ದರು. 1988-89 ರಲ್ಲಿ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿದರು.

1994ರ ಚುನಾವಣೆಯಲ್ಲಿ ಎಸ್‌. ಆರ್. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕೇತ್ರದಿಂದ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ್ದರು. ಅದೇ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್ ವಿರುದ್ಧ ಬಸವರಾಜ ಬೊಮ್ಮಾಯಿ ಕೂಡ ಸೋಲು ಅನುಭವಿಸಿದರು. ನಂತರದಲ್ಲಿ ಬಸವರಾಜ ಬೊಮ್ಮಾಯಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.

ಆನಂತರದಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2008 ರಿಂದ 2024 ರವರೆಗೆ ಸತತ ನಾಲ್ಕು ಬಾರಿ ಗೆದ್ದು, 2021ರಿಂದ 2023 ವರೆಗೆ ರಾಜ್ಯದಲ್ಲಿ 23ನೇ ಮುಖ್ಯಮಂತ್ರಿ ಹುದ್ದೆ‌ ಅಲಂಕರಿಸಿದರು.

ಅದೇ ರೀತಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ತಂದೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು.ಆದರೆ ಯಾವುದೇ ಚುನಾವಣೆ ಎದುರಿಸಿರಲಿಲ್ಲ. ಶಿಗ್ಗಾವಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಸವರಾಜ ಬೊಮ್ಮಾಯಿ 2024ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಶಿಗ್ಗಾವಿ ಕ್ಷೇತ್ರಕ್ಕೆ 2024 ನವೆಂಬರ್ 13 ರಂದು ನಡೆದ ಉಪ ಚುನಾವಣೆಗೆ ಪ್ರಥಮ ಬಾರಿಗೆ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಇಲ್ಲಿಯೂ ಕೂಡ ಪ್ರಥಮ ಚುನಾವಣೆಯಲ್ಲಿಯೇ ಕಾಂಗ್ರೆಸ್‌ ನ ಯಾಸೀರ್ ಖಾನ್ ಪಠಾಣ ವಿರುದ್ಧ 13,448 ಮತಗಳಿಂದ ಸೋಲು ಅನುಭವಿಸುವ ಮೂಲಕ ಬೊಮ್ಮಾಯಿ ಕುಟುಂಬದ ಮೊದಲ ಚುನಾವಣೆ ಸೋಲಿನ ಅನುಭವ ಪಡೆದರು.

ಒಟ್ಟಾರೆ ಈ‌ ಎಲ್ಲಾ ಬೆಳವಣಿಗೆಳನ್ನ ನೋಡಿದಾಗ ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆಗಳು, ಸೋಲು ಕಂಡಿವೆ ಹೊರತು ಗೆಲುವು ನೀಡಿಲ್ಲ‌ ಅನ್ನೋದು ಸ್ಪಷ್ಟವಾಗಿ ಕಣ್ಣಿಗೆ ಕಾಣುವ ಸತ್ಯವಾಗಿದೆ. ಅದೇನೆ ಇರಲಿ, ಪ್ರಜಾಪ್ರಭುತ್ವದಲ್ಲಿ ಮತದಾರನ ತೀರ್ಪೆ ಅಂತಿಮ.

Bommai family's first election defeat! After the grandfather, father, now the grandson is also haunted by the legacy of defeat!

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb