ಮೈಕೊರೆಯುವ ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ ಕುಡಿಯಬಹುದು ಎಂಬ ಸಂದೇಶ ರವಾನಿಸಿದೆ. ಈ ಬಾರಿ ವಾಡಿಕೆಗಿಂತ ಚಳಿ ಹೆಚ್ಚಾಗಿದ್ದು, ಚಳಿಗಾಲ ಮುಗಿಯವವರೆಗೆ ಬಿಯರ್ ದರವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದೆ.
ಮೂಲಗಳ ಪ್ರಕಾರ ಪ್ರತಿವರ್ಷವೂ ಬಿಯರ್ ಮಾರಾಟದಲ್ಲಿ ಕುಸಿತ ಕಾಣುತ್ತಿದ್ದು, ಈ ಪರಿಸ್ಥಿತಿಯಲ್ಲಿ ಬಿಯರ್ ದರ ಏರಿಸಿದ್ರೆ ಹೆಚ್ಚೇನು ಆದಾಯ ಬರುವುದಿಲ್ಲ. ಹಾಗಾಗಿ ನಷ್ಟದ ಕಾರಣದಿಂದ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್ ಸೇವನೆ ಮಾಡೋದಿಲ್ಲ. ಇದರಿಂದ ಬಿಯರ್ ಮಾರಾಟ ಕಡಿಮೆಯಾಗುವ ಆತಂಕ ಇರುವುದರಿಂದ ದರ ಏರಿಕೆ ಮಾಡುವ ವಿಚಾರವನ್ನು ಕೈಬಿಟ್ಟಿದೆ ಎನ್ನಲಾಗಿದೆ.
ಅಬಕಾರಿ ಇಲಾಖೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಇದಕ್ಕಾಗಿ ಬಿಯರ್ ದರ ಹೆಚ್ಚಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಈ ಸಂಬಂಧ ಅಬಕಾರಿ ಇಲಾಖೆ ಪ್ರಸ್ತಾವನೆಯೂ ಸಲ್ಲಿಸಿತ್ತು. ಆದರೆ ಚಳಿಗಾಲ ಆಗಿರುವುದರಿಂದ ಬಿಯರ್ ದರ ಏರಿಕೆಯಾದರೆ ಇಲಾಖೆಯ ಆದಾಯಕ್ಕೂ ಪೆಟ್ಟು ಬೀಳುವ ಸೂಚನೆ ಇರುವುದರಿಂದ ಜನವರಿ ತಿಂಗಳವರೆಗೆ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ವರ್ಷಾಂತ್ಯ ಮುಗಿಯುತ್ತಿದ್ದು, ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಇನ್ನು ಕ್ರಿಸ್‌ಮಸ್ ವೇಳೆಯೂ ರಾಜ್ಯದಲ್ಲಿ ಮದ್ಯ ಸೇವನೆ ಹೆಚ್ಚಾಗಿ ನಡೆಯುವುದರಿಂದ ಅಲ್ಲಿಯವರೆಗೆ ಬಿಯರ್ ಪ್ರಿಯರಿಗೆ ಯಾವುದೇ ದುಬಾರಿ ಟೆನ್ಷನ್ ಇರೋದಿಲ್ಲ. ಬೆಲೆ ಏರಿಕೆ ಆಗದ ಕಾರಣ ಎಂದಿನಂತೆ ಬಿಯರ್ ಕುಡಿಯಲು ಯಾವುದೇ ಅಡ್ಡಿ ಆತಂಕಗಳೂ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಜನವರಿವರೆಗೆ ನಿಶ್ಚಿಂತೆಯಾಗಿ ಬಿಯರ್ ಕುಡಿಯೋಣ ಗುರು ಎಂದು ಎಣ್ಣೆಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ.