ಮುಂಡರಗಿ: ಅಭಿನವ ಜಚನಿ ಎಂದೇ ಖ್ಯಾತರಾದ ಮುಂಡರಗಿ ಸಂಸ್ಥಾನಮಠದ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ‘ಚುಟುಕು ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ ಎಂದು ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೂಜ್ಯರು ಚುಟುಕು ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರು 300ಕ್ಕೂ ಹೆಚ್ಚು ಚುಟುಕುಗಳನ್ನು ರಚಿಸಿ ಚುಟುಕು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವ ಪಡೆದುಕೊಂಡಿದ್ದಾರೆ.
ಕಚುಸಾಪ ಮುಂಡರಗಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನ, ಜಿಲ್ಲಾ ಸಮ್ಮೇಳನ ಮತ್ತು ಅಖಂಡ ಧಾರವಾಡ ಜಿಲ್ಲಾ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ಪರಿಷತ್ತಿನ ಘನತೆಯನ್ನು ಎತ್ತಿಹಿಡಿದಿದ್ದಾರೆ.
ಪೂಜ್ಯರ ಈ ಸರ್ವ ಕಾರ್ಯವನ್ನ ಪರಿಗಣಿಸಿ ಈ ವರ್ಷ ಅವರಿಗೆ ಚುಟುಕು ಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಪ್ರಶಸ್ತಿಯನ್ನು ಮುಂಡರಗಿಯಲ್ಲಿಯೇ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.