ಗದಗ:ಸಮಾಜದಲ್ಲಿನ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ವೀರಶೈವ ಧರ್ಮದ ಮೂಲ ಗುರಿಯಾಗಿದೆ. ಅದಕ್ಕೆಂದೆ ಶ್ರೀ ಹಾನಗಲ್ಲ ಗುರು ಕುಮಾರೇಶ್ವರರು ನಮ್ಮ ಧರ್ಮವನ್ನು ಒಂದುಗೂಡಿಸಿ ಇದನ್ನು ವೀರಶೈವ ಲಿಂಗಾಯತ ಧರ್ಮ ಎಂದು ಕರೆದರು. ಆದರೆ ಈಗೀಗ ನಮ್ಮ ಸಮಾಜ ಒಳಪಂಡಗಳ ಸುಳಿಗೆ ಸಿಕ್ಕು ನಲುಗುತ್ತಿದೆ ಎಂದು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದ ಹಾನಗಲ್ಲ ಗುರು ಕುಮಾರೇಶ್ವರ ಪುರಾಣದಲ್ಲಿ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.
ಒಳ ಪಂಗಡಗಳಲ್ಲಿ ನೀವು ಯಾರೇ ಆಗಿರಿ, ಆದರೆ ಯಾರಾದರೂ ನಿಮ್ಮನ್ನು ನೀವು ಯಾರು? ಎಂದು ಕೇಳಿದರೆ ಮೊದಲು ನಾವು ವೀರಶೈವರು ಎಂದು ಹೇಳಿ ನಂತರ ನಿಮ್ಮ ಒಳಪಂಗಡವನ್ನು ಹೇಳಿರಿ. ಇದರಿಂದ ವೀರಶೈವ ಧರ್ಮ ಜಾಗೃತಿಯ ಕನಸು ನನಸಾಗುತ್ತದೆ, ಹಾನಗಲ್ಲ ಗುರು ಕುಮಾರೇಶ್ವರರು ಬಯಸಿದ ಕನಸು ನನಸಾಗುತ್ತದೆ. ಶ್ರೀ ಕುಮಾರೇಶ್ವರರ ಕನಸಿನ ಸಮಾಶಜವನ್ನು ಕಟ್ಟುವಲ್ಲಿ ನಾವುಗಳು ಬಹಳಷ್ಟು ಶ್ರಮಿಸಬೇಕಿದೆ. ಇಲ್ಲವಾದರೆ ನಾವು ಅವರ ಕನಸಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಇದನ್ನು ವೀರಶೈವ ಧರ್ಮದ ಎಲ್ಲ ಒಳ ಪಂಗಡದವರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಶ್ರೀಗಳು ತಿಳಿಸಿದರು.
ಪುರಾಣಿಕರಾದ ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ,ಗುರು ಪರಂಪರೆಯ ಮೇಲೆ ನಮಗೆ ಎಂದಿಗೂ ಅಚಲವಾದ ನಿಷ್ಠೆ ಇರಬೇಕು. ಪ್ರಾಣ ಹೋಗುವ ಪ್ರಸಂಗ ಬಂದರೂ ಧರ್ಮವನ್ನು ಬಿಡಬಾರದು. ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಹಾನಗಲ್ಲ ಶ್ರೀ ಗುರು ಕುಮಾರೇಶ್ವರರು ತಮ್ಮ ಗುರುಗಳ ಮಾತನ್ನು ಎಂದಿಗೂ ಮೀರಲಿಲ್ಲ, ಎದಿರಾಡಲಿಲ್ಲ, ಪಾಲಿಸದೇ ಬಿಡಲಿಲ್ಲ. ಇದರಿಂದ ಅವರು ಇಡೀ ಸಮಾಜವೇ ಗೌರವಿಸುವಂತಹ ಸ್ವಾಮೀಜಿಗಳಾದರು. ಅವರ ಜೀವನ ಒಂದು ತೆರೆದ ಪುಸ್ತಕವಿದ್ದಂತೆ. ಅದನ್ನು ಓದಿ ಎಲ್ಲರೂ ತಿಳಿಯಬೇಕಾದುದು ಬಹಳಷ್ಟಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಫ್.ಎನ್. ಹುಡೇದ, ಬಿ. ಡಿ. ಯರಗೊಪ್ಪ, ಟಿ. ಬಿ. ಆಡೂರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ, ಗಣ್ಯ ವರ್ತಕ ಬಸವರಾಜ ಪುರ್ತಗೇರಿ, ಚನ್ನಬಸಪ್ಪ ಗೋದಿ, ಮಲ್ಲಪ್ಪ ಕಿತ್ತೂರ, ಚಂದ್ರಶೇಖರಯ್ಯ ಭೂಸನೂರಮಠ ಇನ್ನೂ ಮುಂತಾದವರಿದ್ದು. ಶಿವಯೋಗಿ ಜಕ್ಕಲಿ ನಿರ್ವಹಿಸಿದರು.
.