ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಆರೋಪಿಸಿ, ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರಿನ ವಕೀಲ ಸಚಿನ್ ದೇಶಪಾಂಡೆ ಅವರು ಪತ್ರ ಬರೆದಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ವಿರುದ್ಧ 2017 ರಿಂದ ಬಾಕಿ ಉಳಿದಿರುವ ಹಲವು ಪ್ರಕರಣಗಳ ತನಿಖೆಗೆ ಯಾವುದೇ ವಿವರಣೆ ನೀಡದೆ ಸುಪ್ರೀಂ ಕೋರ್ಟ್ ತಡಯಾಜ್ಞೆ ನೀಡಿದೆ. ಈ ಮೂಲಕ ನ್ಯಾಯಾಂಗ ಬಿಎಸ್ ಯಡಿಯೂರಪ್ಪ ಅವರ ಪರ ನಿಲುವು ತಾಳುತ್ತಿದೆ ಎಂದು ವಕೀಲ ಸಚಿನ್ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಸೆಕ್ಷನ್ 19ಕ್ಕೆ ವಿರುದ್ಧವಾಗಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಚರ್ಚಿಸದೇ ಬಿಎಸ್ ಯಡಿಯೂರಪ್ಪ ಅವರು ಕೋರಿದ ತಕ್ಷಣ ಬಹುತೇಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಪಿಸಿ ಕಾಯ್ದೆಯಡಿ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಹೈಕೋರ್ಟ್ ವಜಾ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಸುಪ್ರೀಂ ಕೋರ್ಟನಲ್ಲಿ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಯಾವುದೇ ವಿವರಣೆ ನೀಡದೆ ತಡೆ ನೀಡಿದೆ. ಇದು ಬಿಎಸ್ ಯಡಿಯೂರಪ್ಪ ಪರವಾಗಿ ಸುಪ್ರೀಂ ಕೋರ್ಟ್ ಪಕ್ಷಪಾತದಿಂದ ನಡೆದುಕೊಂಡಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.