ಗದಗ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮುದಾಯ, ಕುಟುಂಬ ಅಭಿವೃದ್ಧಿಯಾಗಲು ಸಾಧ್ಯ ಎಂದು ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಶಿವಕುಮಾರ ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೂದಿಹಾಳ ಗ್ರಾಮದ ಶ್ರೀ ಬೀರದೇವರ ದೇವಸ್ಥಾನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರ, ಎಸ್ಬಿಐ, ರೀಸೇಟ್ ವತಿಯಿಂದ ಹಮ್ಮಿಕೊಂಡಿದ್ದ ೧೦ ದಿನಗಳ ಊದುಬತ್ತಿ ತಯಾರಿಕಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವ ಅತ್ಯಗತ್ಯತೆ ಹಿಂದಿಗಿಂತ ಇಂದು ಮುಖ್ಯವಾಗಿದೆ. ಮಹಿಳೆ ಅಡುಗೆ ಕೆಲಸಕ್ಕೆ ಸೀಮಿತವಾಗದೇ ಹಲವು ಬಗೆಯ ಕೌಶಲ್ಯಗಳನ್ನು ಬೆಳೆಸಿಕೊಂಡು ವಿವಿಧ ಆರ್ಥಿಕ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೇಸಾಯಿಪಟ್ಟಿ ಮಾತನಾಡಿ, ಸರ್ಕಾರ ಮತ್ತು ಧರ್ಮಸ್ಥಳ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಹಲವು ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕ ಪ್ರಗತಿಯನ್ನು ಕಾಣಬೇಕು. ಉಚಿತ ತರಬೇತಿಯನ್ನು ಪಡೆದುಕೊಂಡು ಸ್ವಾವಲಂಬಿಗಳಾದಾಗ ಮಾತ್ರ ತರಬೇತಿಗೆ ಮಹತ್ವ ಬರುತ್ತದೆ ಎಂದರು.
ಭೀಮಪ್ಪ ಬೇನಾಳ, ಉಮಾದೇವಿ ಚಿಗರಿ, ಮೇಲ್ವಿಚಾರಕಿ ಶ್ವೇತಾ ಕರಗಣ್ಣವರ, ಧರ್ಮಸ್ಥಳ ಸ್ವ ಸಹಾಯ ಗುಂಪುಗಳ ಸದಸ್ಯರು ಹಾಜರಿದ್ದರು.