ಮುಂಡರಗಿ: ಸರ್ಕಾರದ ವ್ಯವಸ್ಥೆಯಲ್ಲಿ ಅನುದಾನದ ಕೊರತೆಯಿದ್ದು, ಇದ್ದುದರಲ್ಲಿಯೇ ನಾನು ಅನುದಾನವನ್ನ ಎಲ್ಲಾ ಊರಿಗೂ ಹಂಚಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಿದರಹಳ್ಳಿ ಗ್ರಾಮದಲ್ಲಿ 33 ಲಕ್ಷ ರೂ. ವೆಚ್ಚದ ಮೂರು ಶಾಲಾ ಕೊಠಡಿಗಳ ಉದ್ಘಾಟನೆ, 10 ಲಕ್ಷ ರೂ. ವೆಚ್ಚದಲ್ಲಿ ಶಿಥಿಲಗೊಂಡ ಕೊಠಡಿಗಳ ದುರಸ್ತಿ, ಹಮ್ಮಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮತ್ತು ಕೊರ್ಲಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಕೊಠಡಿ ದುರಸ್ತಿ ಮತ್ತು ನವೋದಯ ಶಾಲೆಗೆ ನೀರಿನ ಪೈಪ್ಲೈನ್ ಸಂಪರ್ಕ ಕಾಮಗಾರಿಯ ಭೂಮಿ ಪೂಜೆಯನ್ನ ಶಾಸಕರು ನೆರವೇರಿಸಿದರು.
ಈ ವೇಳೆ, ಮುಂಡರಗಿ ಮಂಡಳದ ಬಿಜೆಪಿ ಅಧ್ಯಕ್ಷ ಹೆಮಗಿರೀಶ ಹಾವಿನಾಳ ಮಾತನಾಡಿ,ಬಿದರಹಳ್ಳಿ ಗ್ರಾಮದ ಬಹುದಿನಗಳ ಬೇಡಿಕೆಯಾದ ರೇಣುಕಾಂಬದೇವಿ ದೇವಸ್ಥಾನದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು ನಿರಂತರ ಪ್ರಯತ್ನಿಸುತ್ತಿದ್ದು, ಬರುವ ದಿನಗಳಲ್ಲಿ ಅದನ್ನೂ ಸಹ ನೆರವೇರಿಸಲಾಗುವದುಎಂದು ತಿಳಿಸಿದರು.
ಇದೇ ವೇಳೆ, ಬಿದರಹಳ್ಳಿ ಗ್ರಾಮಕ್ಕೆ ಬಿಸಿಎಂ ವಸತಿ ನಿಲಯ ಮತ್ತು ಕಾಲೇಜು ಮಂಜೂರು ಮಾಡಬೇಕು ಎಂದು ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಇಓ ಎಚ್ ಎಂ ಪಡ್ನೇಶಿ, ಗ್ರಾಮ ಪಂ ಅಧ್ಯಕ್ಷೆ, ಸುನಿತಾ ಹಾರೋಗೆರೆ, ಮಲ್ಲಿಕಾರ್ಜುನ ಹಣಜಿ, ದಾವಲ್ ಸಾಬ್ ನಮಾಜಿ, ಮರುತಿ ನಾಗರಹಳ್ಳಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.